ಜರ್ಮನಿ | ಆಸ್ಪತ್ರೆಯಲ್ಲಿ ಬೆಂಕಿ ದುರಂತ; 3 ರೋಗಿಗಳ ಮೃತ್ಯು
Update: 2025-06-01 22:30 IST
ಸಾಂದರ್ಭಿಕ ಚಿತ್ರ
ಬರ್ಲಿನ್: ಜರ್ಮನಿಯ ಹಂಬರ್ಗ್ ನಗರದಲ್ಲಿನ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಮರಿಯನ್ಕಾಂಕ್ರೆನ್ಹೌಸ್ ಎಂಬಲ್ಲಿನ 4 ಮಹಡಿಗಳ ಆಸ್ಪತ್ರೆಯ ನೆಲ ಅಂತಸ್ತಿನಲ್ಲಿ ವಯಸ್ಸಾದ ಜನರ ಚಿಕಿತ್ಸಾ ವಾರ್ಡ್ನಲ್ಲಿ ಶನಿವಾರ ಮಧ್ಯರಾತ್ರಿಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಮೇಲಿನ ಮಹಡಿಗೂ ಹರಡಿದೆ.
ಆಸ್ಪತ್ರೆಯಾದ್ಯಂತ ಹೊಗೆ ಆವರಿಸಿದ್ದು ರೋಗಿಗಳಿಗೆ ಉಸಿರಾಟಕ್ಕೆ ತೊಂದರೆಯಾಗಿದೆ. ಮೂವರು ರೋಗಿಗಳು ಮೃತಪಟ್ಟಿದ್ದು 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಇಬ್ಬರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದು 16 ಮಂದಿಯ ಸ್ಥಿತಿ ಗಂಭೀರವಾಗಿದೆ. ಬೆಂಕಿಯನ್ನು 20 ನಿಮಿಷದೊಳಗೆ ನಂದಿಸಲಾಗಿದ್ದು ಕೆಲವು ರೋಗಿಗಳನ್ನು ಸಮೀಪದ ಕ್ಲಿನಿಕ್ಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.