×
Ad

ಕ್ಯಾಲಿಫೋರ್ನಿಯಾ ಗವರ್ನರ್ -ಟ್ರಂಪ್ ನಡುವಿನ ಜಟಾಪಟಿ ತೀವ್ರ : ಹೆಚ್ಚುವರಿ 2000 ತುಕಡಿ ನಿಯೋಜನೆಗೆ ಟ್ರಂಪ್ ಆದೇಶ

Update: 2025-06-10 20:33 IST

ಅಧ್ಯಕ್ಷ ಟ್ರಂಪ್ | PC : NDTV  

ವಾಷಿಂಗ್ಟನ್: ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ವಲಸೆ ಅಧಿಕಾರಿಗಳ ಶೋಧ ಕಾರ್ಯ ವಿರೋಧಿಸಿ ಲಾಸ್‍ಏಂಜಲೀಸ್‍ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ನಾಲ್ಕನೇ ದಿನಕ್ಕೆ ಮುಂದುವರಿದಿದ್ದು ಪ್ರತಿಭಟನೆಯನ್ನು ಹತ್ತಿಕ್ಕಲು ಹೆಚ್ಚುವರಿ 2000 ರಾಷ್ಟ್ರೀಯ ಸೇನಾದಳದ ತುಕಡಿಯನ್ನು ನಿಯೋಜಿಸಲು ಅಧ್ಯಕ್ಷ ಟ್ರಂಪ್ ಆದೇಶಿಸಿದ್ದಾರೆ. ಇದರೊಂದಿಗೆ ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ , ಡೆಮಾಕ್ರಟಿಕ್ ಪಕ್ಷದ ನಾಯಕ ಗ್ಯಾವಿನ್ ನ್ಯೂಸಮ್ ಮತ್ತು ಅಮೆರಿಕ ಅಧ್ಯಕ್ಷ, ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ನಡುವಿನ ಜಟಾಪಟಿ ತೀವ್ರಗೊಂಡಿದೆ.

ಸ್ಥಳೀಯಾಡಳಿತದ ಅನುಮೋದನೆ ಪಡೆಯದೆ ಫೆಡರಲ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ನ್ಯೂಸಮ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ಯಾಲಿಫೋರ್ನಿಯಾ ರಾಜ್ಯದ ಆಸ್ತಿ ಮತ್ತು ಸಿಬ್ಬಂದಿಗಳಿಗೆ ರಕ್ಷಣೆ ಒದಗಿಸಲು ಈ ತುಕಡಿಗಳನ್ನು ನಿಯೋಜಿಸಿರುವುದಾಗಿ ಶ್ವೇತಭವನದ ಮೂಲಗಳು ಹೇಳಿವೆ.

ಟ್ರಂಪ್ ಆದೇಶದ ಬಳಿಕ ಕ್ಯಾಲಿಫೋರ್ನಿಯಾದಲ್ಲಿ ನಿಯೋಜಿಸಲಾದ ರಾಷ್ಟ್ರೀಯ ತುಕಡಿಯ ಯೋಧರ ಸಂಖ್ಯೆ 4,100ಕ್ಕೂ ಹೆಚ್ಚಾಗಿದೆ. ಇದರಲ್ಲಿ ನೌಕಾಪಡೆಯ 700 ಸಿಬ್ಬಂದಿಗಳೂ ಸೇರಿದ್ದಾರೆ. `ಅಧ್ಯಕ್ಷರ ಆದೇಶದ ಪ್ರಕಾರ ವಲಸೆ ಅಧಿಕಾರಿಗಳು ತಮ್ಮ ಕಾರ್ಯವನ್ನು ಸುಸೂತ್ರವಾಗಿ ಮುಂದುವರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ರಾಷ್ಟ್ರೀಯ ರಕ್ಷಣಾದಳದ ಹೆಚ್ಚುವರಿ 2000 ಸಿಬ್ಬಂದಿಗಳನ್ನು ಕ್ಯಾಲಿಫೋರ್ನಿಯಾಕ್ಕೆ ನಿಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದು ವಿಕ್ಷಿಪ್ತ ಮನೋಭಾವದ ಹುಚ್ಚು ಕಾರ್ಯ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಖಂಡಿಸಿದ್ದು `ಅಮೆರಿಕದ ನೌಕಾಪಡೆಯ ಸಿಬ್ಬಂದಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅನೇಕ ಯುದ್ಧಗಳಲ್ಲಿ ಗೌರವಯುತವಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಸರ್ವಾಧಿಕಾರಿ ಅಧ್ಯಕ್ಷರ ಗೊಂದಲಮಯ ಅವಾಸ್ತವಿಕ ಕಲ್ಪನೆಯನ್ನು ಪೂರ್ಣಗೊಳಿಸಲು ಮತ್ತು ತಮ್ಮದೇ ದೇಶವಾಸಿಗಳನ್ನು ಎದುರಿಸಲು ಇವರನ್ನು ನಿಯೋಜಿಸಬಾರದು. ಇದು ಅಮೆರಿಕ ವಿರೋಧಿಯಾಗಿದೆ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ರಾಷ್ಟ್ರೀಯ ಸೇನಾದಳವನ್ನು ನಿಯೋಜಿಸುವ ಕ್ರಮ ಕಾನೂನುಬಾಹಿರವಾಗಿದ್ದು ಇದನ್ನು ಪ್ರಶ್ನಿಸಿ ಮೊಕದ್ದಮೆ ದಾಖಲಿಸಲಾಗುವುದು' ಎಂದು ಗ್ಯಾವಿನ್ ಸೋಮವಾರ ಹೇಳಿದ್ದರು.

ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಕ್ಯಾಲಿಫೋರ್ನಿಯಾದಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದ ಕಾರ್ಯಾಚರಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ರವಿವಾರ ಹಿಂಸಾರೂಪಕ್ಕೆ ತಿರುಗಿದ್ದು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಲೂಟಿ ಮಾಡಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದ್ದು ಹಲವರನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News