ರಶ್ಯ-ಉಕ್ರೇನ್ ಸಂಘರ್ಷ ಅಂತ್ಯಗೊಳಿಸಬಹುದು ಎಂದು ಭಾವಿಸಿದ್ದೆ: ವಿಫಲತೆ ಒಪ್ಪಿಕೊಂಡ ಟ್ರಂಪ್
ವ್ಲಾದಿಮಿರ್ ಪುಟಿನ್ , ಡೊನಾಲ್ಡ್ ಟ್ರಂಪ್ | PC : X
ವಾಷಿಂಗ್ಟನ್, ಸೆ.6: ರಶ್ಯ-ಉಕ್ರೇನ್ ಸಂಘರ್ಷವು ಬಹುಷಃ ತನ್ನ ಆಡಳಿತಾವಧಿಯಲ್ಲಿ ಎದುರಿಸಿದ ಅತ್ಯಂತ ಕಠಿಣ ಬಿಕ್ಕಟ್ಟು ಆಗಿದ್ದು ತನ್ನ ಚುನಾವಣಾ ಪ್ರಚಾರದ ಒಂದು ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಯುದ್ದವನ್ನು ಕೊನೆಗೊಳಿಸುವಲ್ಲಿನ ವಿಫಲತೆಯನ್ನು ಒಪ್ಪಿಕೊಂಡಿದ್ದಾರೆ.
ಜಗತ್ತಿನಲ್ಲಿ ದೀರ್ಘಾವಧಿಯಿಂದ ಮುಂದುವರಿದಿದ್ದ ಹಲವು ಯುದ್ಧಗಳನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರೊಂದಿಗಿನ ಉತ್ತಮ ಸಂಬಂಧದ ಹೊರತಾಗಿಯೂ ಉಕ್ರೇನ್ ನಲ್ಲಿನ ಸಂಘರ್ಷವನ್ನು ನಿಲ್ಲಿಸುವುದು ಅತ್ಯಂತ ಕಠಿಣವಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ನಾವು ಕೇವಲ ಏಳು ತಿಂಗಳುಗಳಲ್ಲಿ ಮಾಡಿರುವುದನ್ನು ಯಾರೂ ಮಾಡಿಲ್ಲ. ನಾವು 7 ಯುದ್ಧಗಳನ್ನು ನಿಲ್ಲಿಸಿದೆವು. ಆದರೆ ಅತ್ಯಂತ ಸುಲಭದಲ್ಲಿ ಬಗೆಹರಿಸಬಹುದು ಎಂದು ಭಾವಿಸಿದ ರಶ್ಯ-ಉಕ್ರೇನ್ ಯುದ್ಧ ಅತ್ಯಂತ ಕಠಿಣವಾಗಿದೆ. ರಶ್ಯ ಅಧ್ಯಕ್ಷ ಪುಟಿನ್‍ರೊಂದಿಗಿನ ಸಂಬಂಧವನ್ನು ಗಮನಿಸಿದರೆ ಇದು ಅತೀ ಸುಲಭವಾಗಿ ಇತ್ಯರ್ಥಗೊಳ್ಳಬಹುದಿತ್ತು. ಆದರೆ ಯುದ್ಧ ನಿಲ್ಲುತ್ತದೆ ಎಂಬ ಭರವಸೆಯಿದೆ ಎಂದು ಟ್ರಂಪ್ ಹೇಳಿದ್ದಾರೆ.