×
Ad

ಭಾರತದ ಮೇಲೆ 25% ತೆರಿಗೆ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Update: 2025-07-30 19:34 IST

Photo | PTI

ಹೊಸದಿಲ್ಲಿ,ಜು.30: ಉಭಯ ರಾಷ್ಟ್ರಗಳ ನಡುವೆ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇ.25ರಷ್ಟು ಸುಂಕವನ್ನು ವಿಧಿಸುವುದನ್ನು ಬುಧವಾರ ದೃಢಪಡಿಸಿದ್ದು, ಇದು ಆ.1ರಿಂದಲೇ ಜಾರಿಗೊಳ್ಳಲಿದೆ. ರಶ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವದಕ್ಕಾಗಿ ಭಾರತವು ಹೆಚ್ಚುವರಿ ದಂಡವನ್ನೂ ಪಾವತಿಸಬೇಕಿದೆ ಎಂದೂ ಟ್ರಂಪ್ ಹೇಳಿದ್ದಾರೆ.

ಭಾರತಕ್ಕೆ ವಿಧಿಸಲಾಗಿರುವ ಶೇ.25 ಸುಂಕ ದರವು ಎ.2ರಂದು ತನ್ನ ‘ಲಿಬರೇಷನ್ ಡೇ’ ಸಮ್ಮೇಳನದಲ್ಲಿ ಟ್ರಂಪ್ ಘೋಷಿಸಿದ್ದ ಶೇ.26ಕ್ಕಿಂತ ಒಂದು ಶೇಕಡಾ ಕಡಿಮೆಯಾಗಿದೆ.

‘ನೆನಪಿಡಿ,ಭಾರತವು ನಮ್ಮ ಮಿತ್ರದೇಶವಾಗಿದ್ದರೂ ಈ ಎಲ್ಲ ವರ್ಷಗಳಲ್ಲಿ ನಾವು ಅದರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರವನ್ನು ಮಾಡಿದ್ದೇವೆ,ಅದರ ಸುಂಕ ದರಗಳು ಅತ್ಯಂತ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಅದು ಇತರ ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಕಿರಿಕಿರಿಯನ್ನುಂಟು ಮಾಡುವ ಹಣಕಾಸೇತರ ವ್ಯಾಪಾರ ಅಡೆತಡೆಗಳನ್ನು ಹೊಂದಿದೆ’ ಎಂದು ಟ್ರಂಪ್ ತನ್ನ ಟ್ರುಥ್ ಸೋಷಿಯಲ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಅಲ್ಲದೆ ಅವರು(ಭಾರತ) ತಮ್ಮ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ಯಾವಾಗಲೂ ರಶ್ಯಾದಿಂದ ಖರೀದಿಸುತ್ತಾರೆ ಮತ್ತು ಚೀನಾದೊಂದಿಗೆ ರಶ್ಯಾ ತೈಲದ ಬಹು ದೊಡ್ಡ ಖರೀದಿದಾರರಾಗಿದ್ದಾರೆ. ರಶ್ಯಾ ಉಕ್ರೇನ್ನಲ್ಲಿ ಹತ್ಯೆಗಳನ್ನು ನಿಲ್ಲಿಸಬೇಕು ಎಂದು ಎಲ್ಲರೂ ಬಯಸಿರುವ ಈ ಸಮಯದಲ್ಲಿ ಇದೆಲ್ಲ ಒಳ್ಳೆಯ ವಿಷಯವಲ್ಲ. ಆದ್ದರಿಂದ ಭಾರತವು ಆ.1ರಿಂದ ಶೇ.25ರಷ್ಟು ಸುಂಕದ ಜೊತೆಗೆ ರಶ್ಯದಿಂದ ಖರೀದಿಗಾಗಿ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ರಶ್ಯಾದಿಂದ ಸರಕುಗಳನ್ನು, ನಿರ್ದಿಷ್ಟವಾಗಿ ತೈಲವನ್ನು ಖರೀದಿಸುವ ದೇಶಗಳ ಮೇಲೆ ಪರಿಣಾಮ ಬೀರುವ ಪೂರಕ ಶುಲ್ಕಗಳು ಸೇರಿದಂತೆ ರಶ್ಯಾದ ಮೇಲೆ ಸಂಭಾವ್ಯ ಸುಂಕಗಳ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ. ಉಕ್ರೇನ್ ಅನ್ನು ಬೆಂಬಲಿಸುತ್ತಿರುವ ಅಮೆರಿಕ ಮತ್ತು ಅದರ ಮಿತ್ರದೇಶಗಳು ಈ ತೈಲ ವಹಿವಾಟುಗಳು ರಶ್ಯಾವನ್ನು ಪರೋಕ್ಷವಾಗಿ ಬೆಂಬಲಿಸುತ್ತಿವೆ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಕಡೆಗಣಿಸಿ ರಶ್ಯಾದ ಆರ್ಥಿಕತೆಯನ್ನು ಬಲಗೊಳಿಸುತ್ತಿವೆ ಎಂದು ಪರಿಗಣಿಸಿವೆ.

ಈ ನಡುವೆ ಟ್ರಂಪ್ ಅವರ ಪ್ರತಿಸುಂಕಗಳು ಇನ್ನಷ್ಟು ವಿಳಂಬವಿಲ್ಲದೆ ಆ.1ರಿಂದಲೇ ಜಾರಿಗೊಳ್ಳಲಿವೆ. ಇದನ್ನು ಟ್ರಂಪ್ ತನ್ನ ಟ್ರುಥ್ ಸೋಷಿಯಲ್ ಪೋಸ್ಟ್‌ ನಲ್ಲಿ ದೃಢಪಡಿಸಿದ್ದಾರೆ.

► ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬಿಕ್ಕಟ್ಟು

ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂದರ್ಭದಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು ಎಂದು ಘೋಷಿಸಿದ್ದರೂ ಮಧ್ಯಂತರ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲು ಉಭಯ ದೇಶಗಳಿಗೆ ಸಾಧ್ಯವಾಗಿಲ್ಲ.

ಉಭಯ ದೇಶಗಳ ಅಧಿಕಾರಿಗಳ ನಡುವೆ ಈಗಾಗಲೇ ಐದು ಸುತ್ತುಗಳ ಮಾತುಕತೆಗಳು ನಡೆದಿದ್ದು,ಆಗಸ್ಟ್ ನಲ್ಲಿ ಆರನೇ ಸುತ್ತಿನ ಮಾತುಕತೆ ನಿಗದಿಯಾಗಿದೆ. ಇದಕ್ಕಾಗಿ ಅಮೆರಿಕದ ತಂಡವೊಂದು ಭಾರತಕ್ಕೆ ಭೇಟಿ ನೀಡಲಿದೆ.

ಮಂಗಳವಾರ(ಸ್ಥಳೀಯ ಕಾಲಮಾನ) ಏರ್ ಫೋರ್ಸ್ ಒನ್ ವಿಮಾನದಲ್ಲಿ ಸುದ್ದಿಗೋಷ್ಠಿಯಲ್ಲಿ ವ್ಯಾಪಾರ ಒಪ್ಪಂದವು ಅಂತಿಮಗೊಳ್ಳದ್ದರಿಂದ ಭಾರತವು ಶೇ.25ರಿಂದ ಶೇ.26ರಷ್ಟು ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಸುಳಿವು ನೀಡಿದ್ದರು.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಮಾತುಕತೆಗಳು ಪ್ರಗತಿಯಲ್ಲಿರುವುದರಿಂದ ಅಮೆರಿಕವು ಆ.1ರಿಂದ ವಿಧಿಸಬಹುದಾದ ಯಾವುದೇ ಸುಂಕಗಳು ತಾತ್ಕಾಲಿಕವಾಗಿರಲಿವೆ ಎಂದು ಭಾರತ ಸರಕಾರದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News