ಭಾರತ–ಪಾಕಿಸ್ತಾನದ ಸಂಘರ್ಷದಲ್ಲಿ ಐದು ಜೆಟ್ ನಾಶ, ಪರಮಾಣು ಯುದ್ಧವಾಗುವ ಸಂಭವವಿತ್ತು: ಮತ್ತೆ ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್/ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವು ಪರಮಾಣು ಯುದ್ಧದ ಅಂಚಿಗೆ ತಲುಪಿತ್ತು, ಆದರೆ ಅಮೆರಿಕದ ಮಧ್ಯಸ್ಥಿಕೆಯಿಂದ ಅದು ತಪ್ಪಿಸಲಾಯಿತು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಯುದ್ಧದ ವೇಳೆ ಐದು ಯುದ್ಧ ವಿಮಾನಗಳು ನಾಶವಾಗಿದೆಯೆಂದು ಅವರು ಶ್ವೇತಭವನದಲ್ಲಿ ನಡೆದ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಉಲ್ಲೇಖಿಸಿದರು.
" ಐದು ಜೆಟ್ ವಿಮಾನಗಳನ್ನು ಹೊಡೆದುರುಳಿಸಿದರು. ಹಿಂದಕ್ಕೆ–ಮುಂದಕ್ಕೆ ನಡೆಯುತ್ತಿದ್ದ ಈ ಸಂಘರ್ಷವು ಪರಮಾಣು ಯುದ್ಧದತ್ತ ಸಾಗುತ್ತಿತ್ತು. ನಾನು ಅವರಿಗೆ ಕರೆ ಮಾಡಿ, ‘ಇದು ಸಾಕು. ಇನ್ನು ವ್ಯಾಪಾರ ಮಾಡಲು ಸಾಧ್ಯವಿಲ್ಲ. ನೀವು ಹೀಗೆ ಮುಂದುವರಿದರೆ ಪರಿಣಾಮ ಭೀಕರವಾಗಬಹುದು’ ಎಂದು ತಿಳಿಸಿದ್ದೆ. ಆ ಮೂಲಕ ನಾವು ಯುದ್ಧ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ," ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅವರು ಇಸ್ರೇಲ್–ಇರಾನ್, ಕೊಸೊವೊ–ಸರ್ಬಿಯಾ ಮತ್ತು ಕಾಂಗೋ–ರುವಾಂಡಾ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಿದ್ದನ್ನು ಉಲ್ಲೇಖಿಸಿದರು.
ಅಮೆರಿಕದ ರಾಯಭಾರಿ ಡೊರೊಥಿ ಶಿಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ 'ಬಹುಪಕ್ಷೀಯತೆ ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥ' ಕುರಿತು ಚರ್ಚೆಯಲ್ಲಿ ಮಾತನಾಡುತ್ತಾ, ಕಳೆದ ಮೂರು ತಿಂಗಳಲ್ಲಿ ಅಮೆರಿಕದ ನಾಯತ್ವವು ಭಾರತ–ಪಾಕಿಸ್ತಾನ ಸೇರಿದಂತೆ ಹಲವು ಪ್ರಾದೇಶಿಕ ಉದ್ವಿಗ್ನತೆಗಳನ್ನು ಶಮನಗೊಳಿಸಲು ಮುಂದಾಗಿದೆ ಎಂದು ಹೇಳಿದರು. "ಟ್ರಂಪ್ ಆಡಳಿತ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ನಾವು ಈ ಕ್ರಮಗಳನ್ನು ಶ್ಲಾಘಿಸುತ್ತೇವೆ" ಎಂದು ಅವರು ಅಭಿಪ್ರಾಯಪಟ್ಟರು