ನಿರೂಪಕ ಸ್ಟೀಫನ್ ಕೋಲ್ಬರ್ಟ್ ರನ್ನು ಕಸದ ಬುಟ್ಟಿಗೆ ಎಸೆಯುವ AI ರಚಿತ ವೀಡಿಯೊ ಹಂಚಿಕೊಂಡ ಟ್ರಂಪ್!
Screengrab:X/@realDonaldTrump
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಕ್ಸ್‌ನಲ್ಲಿ AI ರಚಿತ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ʼದಿ ಲೇಟ್ ಶೋʼ ನಿರೂಪಕ ಸ್ಟೀಫನ್ ಕೋಲ್ಬರ್ಟ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡ AI ರಚಿತ ವೀಡಿಯೊದಲ್ಲಿ, ಸ್ಟೀಫನ್ ಕೋಲ್ಬರ್ಟ್ ನಿರೂಪಣೆ ಮಾಡುತ್ತಿದ್ದಾಗ ಬಂದ ಟ್ರಂಪ್, ಸ್ಟೀಫನ್ ಕೋಲ್ಬರ್ಟ್ ಅವರನ್ನು ಎತ್ತಿ ಕಸದ ಬುಟ್ಟಿಗೆ ಎಸೆಯುವುದು, ನಂತರ ಹರ್ಷೋದ್ಗಾರ ಮಾಡುವ ಜನಸಮೂಹದ ಮುಂದೆ ಟ್ರಂಪ್ ನೃತ್ಯ ಮಾಡುವುದು ಕಂಡು ಬಂದಿದೆ.
ಯಾವುದೇ ಶೀರ್ಷಿಕೆಯಿಲ್ಲದೆ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ, ಟ್ರಂಪ್ ಮತ್ತು ನಿರೂಪಕನ ನಡುವಿನ ದೀರ್ಘಕಾಲದ ವಿವಾದದ ಬಗ್ಗೆ ಬೆಳಕು ಚೆಲ್ಲುತ್ತದೆ.
ಈ ಪೋಸ್ಟ್‌ಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. “ಟ್ರಂಪ್ ಅವರು ವಿರೋಧಿಗಳ ಮೇಲೆ ದಾಳಿ ಮಾಡುವ ಹಳೆಯ ಶೈಲಿ” ಎಂದು ಟ್ರಂಪ್ ಬೆಂಬಲಿಗರು ಹೇಳಿದರು. “ಇದು ಟ್ರಂಪ್ ಆಡಳಿತವು ಪ್ರಮುಖ ಧ್ವನಿಯನ್ನು ಮೌನಗೊಳಿಸುತ್ತಿರುವುದಕ್ಕೆ ಮತ್ತೊಂದು ಉದಾಹರಣೆ” ಎಂದು ಟ್ರಂಪ್ ವಿರೋಧಿಗಳು ಪ್ರತಿಕ್ರಿಯಿದ್ದಾರೆ.
ಕೋಲ್ಬರ್ಟ್ ಅವರು ದಶಕದಿಂದ ನಡೆಸುತ್ತಿದ್ದ ದಿ ಲೇಟ್ ಶೋ ರದ್ದು ಘೋಷಿಸಿದ ನಂತರ ಟ್ರಂಪ್ ಅವರು AI ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಕೋಲ್ಬರ್ಟ್ CBS ವಾಹಿನಿಯಲ್ಲಿ ಕೆಲಸ ಕೊನೆಗೊಳಿಸಿದ್ದಾರೆ, ಅವರು ಇಷ್ಟು ದಿನ ಕಾರ್ಯಕ್ರಮ ನಡೆಸಿದ್ದರು ಎಂಬುದು ಅದ್ಭುತ, ಯಾವುದೇ ಪ್ರತಿಭೆ ಇಲ್ಲ, ರೇಟಿಂಗ್ ಇಲ್ಲ, ಜೀವನವೇ ಇಲ್ಲ. ಅವರು ಸತ್ತ ವ್ಯಕ್ತಿಯಂತೆ ಇದ್ದರು” ಎಂದು ಟ್ರಂಪ್ ಟೀಕಿಸಿದ್ದಾರೆ.
ನೀವು ಬೀದಿಯಿಂದ ಯಾರನ್ನಾದರೂ ಕರೆತಂದರೂ ಈ ಮೂರ್ಖ ವ್ಯಕ್ತಿಗಿಂತ ಉತ್ತಮವಾಗಿರುತ್ತಿದ್ದರು. ಕೊನೆಗೂ ಆತ ಹೋಗಿದ್ದಾನೆ ಎಂಬುದಕ್ಕೆ ದೇವರಿಗೆ ಧನ್ಯವಾದಗಳು ಎಂದು ಟ್ರಂಪ್ ಹೇಳಿದ್ದಾರೆ.
CBS ವಾಹಿನಿ ʼದಿ ಲೇಟ್ ಶೋʼ ರದ್ದುಗೊಳಿಸುವುದಾಗಿ ಘೋಷಿಸಿದ ನಂತರ, ಕೋಲ್ಬರ್ಟ್ ಅವರನ್ನು ಕಾರ್ಯಕ್ರಮದಿಂದ ವಜಾಗೊಳಿಸಿರುವ ಬಗ್ಗೆ ಟ್ರಂಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
— Donald J. Trump (@realDonaldTrump) May 22, 2026