ವಿವಾದದ ಬಳಿಕ Nvidiaಗೆ ಮರಳಿದ ಜೆನ್ಸನ್ ವಾಂಗ್ಗೆ ಟ್ರಂಪ್ ಸ್ವಾಗತ
‘ಎರಡನೇ ಅವಧಿಯಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿದ್ದಾರೆ’ ಎಂದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್, ನ. 27: ವಿವಾದಗಳು ಮತ್ತು ತನಿಖೆಯ ಹಿನ್ನೆಲೆಯಲ್ಲಿ Nvidia ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದ ಜೆನ್ಸನ್ ವಾಂಗ್ ಅವರು ಮತ್ತೆ ಅಧಿಕಾರಕ್ಕೆ ಮರಳಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ. ಇದೊಂದು ‘ಅತ್ಯುತ್ತಮ ಬೆಳವಣಿಗೆ’ ಎಂದು ಹೇಳಿರುವ ಅವರು, ವಾಂಗ್ ಅವರ ಎರಡನೇ ಅವಧಿ ಮೊದಲಿಗಿಂತಲೂ ಉತ್ತಮವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಅವರು ಮರಳಿರುವುದು ದೊಡ್ಡ ವಿಷಯ. ನಾನು ಅವರೊಂದಿಗೆ ಮಾತನಾಡಿದಾಗ, ಮರಳಿರುವುದಕ್ಕೆ ಅವರು ಬಹಳ ಸಂತೋಷಪಟ್ಟಿದ್ದರು. ಇದನ್ನು ಅವರು ತಮ್ಮ 'ಎರಡನೇ ಅವಧಿ' ಎಂದು ಕರೆಯುತ್ತಾರೆ. ಮೊದಲ ಅವಧಿಗಿಂತ ಎರಡನೇ ಅವಧಿಯಲ್ಲಿ ಅವರು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ" ಎಂದು ಟ್ರಂಪ್ ಹೇಳಿದ್ದಾರೆ.
Nvidia ಮಂಡಳಿಯು ವಾಂಗ್ ಅವರನ್ನು ಅಧ್ಯಕ್ಷ ಮತ್ತು ಸಿಇಒ ಆಗಿ ಸರ್ವಾನುಮತದಿಂದ ಮರುನೇಮಕ ಮಾಡಿದ ಕೆಲವೇ ದಿನಗಳಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಅವರನ್ನು ಮರಳಿ ಕರೆತರುವ ಉದ್ದೇಶವಿಲ್ಲ ಎಂದು ಹೇಳಿದ್ದ ಮಂಡಳಿ ತನ್ನ ನಿಲುವನ್ನು ಬದಲಿಸಿದೆ.
ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್ನ್ಯಾಷನಲ್ ನ ಮಾಜಿ ಕಾರ್ಯನಿರ್ವಾಹಕಿ ಆಲಿಸ್ ವಾಂಗ್ ಸೇರಿದಂತೆ ಹಲವು ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೆನ್ಸನ್ ವಾಂಗ್ ನ. 12ರಂದು ಕಂಪೆನಿಗೆ ರಾಜೀನಾಮೆ ನೀಡಿದ್ದರು. ಆಲಿಸ್ ವಾಂಗ್ ಅವರಿಗೆ ಚೀನಾದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕವಿದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಶಂಕಿಸಿದ್ದರು. ಆದರೆ, ಈ ಆರೋಪಗಳು ಸಾಬೀತಾಗಿಲ್ಲ. ಚೀನಾ ಕೂಡ ಆರೋಪಗಳನ್ನು ನಿರಾಕರಿಸಿದೆ.
ವಾಂಗ್ ಅವರ ಮರುನೇಮಕಕ್ಕೆ ಟ್ರಂಪ್ ಮಂಡಳಿಯ ನಿರ್ಧಾರಕ್ಕೂ ಮೊದಲೇ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಕಳೆದ ವಾರ ಚೀನಾದ ಶೆನ್ಜೆನ್ ನಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ನಡೆದ ಸಭೆಯಲ್ಲಿ ವಾಂಗ್ ಅವರಿಗೆ ‘ಎರಡನೇ ಅವಕಾಶ’ ನೀಡಬೇಕು ಎಂದು ತಾನು ಕ್ಸಿ ಅವರಿಗೆ ತಿಳಿಸಿದ್ದಾಗಿ ಟ್ರಂಪ್ ಹೇಳಿದ್ದರು.
ಸೋಮವಾರ Nvidia ವಾಂಗ್ ಅವರನ್ನು ಮರುನೇಮಕ ಮಾಡುವುದಾಗಿ ಘೋಷಿಸಿದ ಬಳಿಕ ಟ್ರಂಪ್ ಈ ನಿರ್ಧಾರವನ್ನು ‘ಸರಿಯಾದ ಮತ್ತು ಸೂಕ್ತ ನಿರ್ಧಾರ’ ಎಂದು ಅಭಿಪ್ರಾಯಪಟ್ಟರು. ವಾಂಗ್ ಅವರನ್ನು ‘ಮಹಾನ್ ದೇಶಭಕ್ತ ಮತ್ತು ದೇಶದ ಸಂಪತ್ತು’ ಎಂದು ಕರೆದಿದ್ದ ಅವರು, Nvidia ಹಾಗೂ ಅಮೆರಿಕದ ಆರ್ಥಿಕತೆಯ ಯಶಸ್ಸಿಗೆ ಅವರ ನಾಯಕತ್ವ ಅಗತ್ಯ ಎಂದು ಪ್ರತಿಪಾದಿಸಿದ್ದರು.
ವಾಂಗ್ ಅವರ ಮರುನೇಮಕದಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂಬ ವಿಶ್ವಾಸವನ್ನು ಅಮೆರಿಕ ಸರಕಾರ ಹೊಂದಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ವಾಂಗ್ ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದಕ್ಕೆ ಸರಕಾರದ ಬಳಿ ಸಾಕ್ಷ್ಯಗಳಿಲ್ಲ ಎಂದು ಅಟಾರ್ನಿ ಜನರಲ್ ದೃಢಪಡಿಸಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ವಾಂಗ್ ಅವರೊಂದಿಗೆ ಚರ್ಚೆ ನಡೆಸಿ, ಅಮೆರಿಕ ಸರಕಾರದ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಅವರನ್ನು ಮರುನೇಮಕ ಮಾಡಲು ಮಂಡಳಿಯು ಸರ್ವಾನುಮತದಿಂದ ನಿರ್ಧರಿಸಿದೆ ಎಂದು Nvidia ತಿಳಿಸಿದೆ. ಅವರ ಮರಳುವಿಕೆಯಿಂದ ರಾಷ್ಟ್ರೀಯ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಕಂಪೆನಿ ಹೇಳಿದೆ.
ಹಾರ್ವೆ ಸಿ. ಜೋನ್ಸ್ ಅವರು ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮಧ್ಯಂತರ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಕೊಲೆಟ್ ಕ್ರೆಸ್ ಅವರು ಮತ್ತೆ ಮುಖ್ಯ ಹಣಕಾಸು ಅಧಿಕಾರಿ (CFO) ಹುದ್ದೆಗೆ ಮರಳಿದ್ದಾರೆ.
ಇದೇ ವೇಳೆ, ವಿದೇಶಿ ಗುಪ್ತಚರ ಕಾರ್ಯಾಚರಣೆಯ ಆರೋಪಗಳ ಕುರಿತು ಸ್ವತಂತ್ರ ತನಿಖೆಯನ್ನು ಮುಂದುವರಿಸುವುದಾಗಿ Nvidia ತಿಳಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ರಫ್ತು ನಿಯಂತ್ರಣಕ್ಕೆ ಸಂಬಂಧಿಸಿದ ಅಪಾಯಗಳ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಿರುವ ಕಂಪೆನಿ, 'ಚೀಫ್ ಕಂಪ್ಲೈಯನ್ಸ್ ಆಫೀಸರ್' (ನಿಯಮ ಪಾಲನೆ ಮುಖ್ಯಸ್ಥ) ಹುದ್ದೆಗೆ ವ್ಯಕ್ತಿಯೊಬ್ಬರನ್ನು ನೇಮಕ ಮಾಡಲು ಉದ್ದೇಶಿಸಿದೆ.
ಅಮೆರಿಕದ ರಫ್ತು ನಿಯಮಗಳ ಪಾಲನೆಗೆ ಸಂಬಂಧಿಸಿದ ಆಂತರಿಕ ತನಿಖೆಯನ್ನು ಮುಂದುವರಿಸುವಂತೆಯೂ ಟ್ರಂಪ್ Nvidiaವನ್ನು ಒತ್ತಾಯಿಸಿದ್ದಾರೆ.