ಫೆಲೆಸ್ತೀನ್ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆಂದು ಇಸ್ರೇಲ್‌ನ ಇಬ್ಬರು ಮಂತ್ರಿಗಳಿಗೆ ನಿರ್ಬಂಧ ಹೇರಿದ ಬ್ರಿಟನ್
File Photo (PTI)
ಗಾಝಾ : ಫೆಲೆಸ್ತೀನ್ ವಿರುದ್ಧ ಪದೇ ಪದೇ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆಂದು ಇಬ್ಬರು ಬಲಪಂಥೀಯ ಇಸ್ರೇಲ್ ಮಂತ್ರಿಗಳಿಗೆ ಬ್ರಿಟನ್ ನಿರ್ಬಂಧವನ್ನು ವಿಧಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ಮಂತ್ರಿಗಳಾದ ಇಟಮಾರ್ ಬೆನ್-ಗ್ವಿರ್ ಮತ್ತು ಬೆಜಲೆಲ್ ಸ್ಮೋಟ್ರಿಚ್ ಅವರಿಗೆ ಬ್ರಿಟನ್‌ಗೆ ಪ್ರೇಶಿಸದಂತೆ ನಿಷೇಧಿಸಲಾಗುವುದು. ವಿದೇಶಾಂಗ ಕಾರ್ಯದರ್ಶಿಗಳು ಘೋಷಿಸಿರುವ ಕ್ರಮದ ಭಾಗವಾಗಿ ಯುಕೆಯಲ್ಲಿರುವ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬ್ರಿಟನ್ ತಿಳಿಸಿದೆ.
ಇದು ಆಸ್ಟ್ರೇಲಿಯಾ, ನಾರ್ವೆ, ಕೆನಡಾ ಮತ್ತು ನ್ಯೂಝಿಲೆಂಡ್ ತೆಗೆದುಕೊಂಡಿರುವ ಜಂಟಿ ಕ್ರಮದ ಭಾಗವಾಗಿದೆ ಎಂದು ಹೇಳಲಾಗಿದೆ. ವೆಸ್ಟ್‌ಬ್ಯಾಂಕ್‌ನಲ್ಲಿ ಫೆಲೆಸ್ತೀನ್ ನಾಗರಿಕರ ವಿರುದ್ಧ ಇಸ್ರೇಲ್‌ನ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಬೆದರಿಕೆ ನಿಲ್ಲಬೇಕು ಎಂದು ಐದು ರಾಷ್ಟ್ರಗಳು ಸ್ಪಷ್ಟಪಡಿಸಿವೆ ಎಂದು ಬ್ರಿಟನ್ ವಿದೇಶಾಂಗ ಕಚೇರಿ ತಿಳಿಸಿದೆ.
ಹಣಕಾಸು ಸಚಿವ ಸ್ಮೋಟ್ರಿಚ್ ಮತ್ತು ರಾಷ್ಟ್ರೀಯ ಭದ್ರತಾ ಸಚಿವ ಬೆನ್-ಗ್ವಿರ್ ಹಿಂಸಾಚಾರ ಮತ್ತು ಫೆಲೆಸ್ತೀನ್ ನಾಗರಿಕರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಚೋದಿಸಿದ್ದಾರೆ ಎಂದು ಡೇವಿಡ್ ಲ್ಯಾಮಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್, ಚುನಾಯಿತ ಪ್ರತಿನಿಧಿಗಳು ಮತ್ತು ಸರಕಾರದ ಸದಸ್ಯರ ವಿರುದ್ಧದ ಈ ಕ್ರಮವು ಅತಿರೇಕದ್ದಾಗಿದೆ ಎಂದು ಹೇಳಿದೆ.
ಈ ಕ್ರಮವನ್ನು ಖಂಡಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಈ ನಿರ್ಬಂಧಗಳು ಕದನ ವಿರಾಮವನ್ನು ಸಾಧಿಸಲು, ಎಲ್ಲಾ ಒತ್ತೆಯಾಳುಗಳನ್ನು ಮನೆಗೆ ಕರೆತರಲು ಮತ್ತು ಯುದ್ಧವನ್ನು ಕೊನೆಗೊಳಿಸುವ ಅಮೆರಿಕ ನೇತೃತ್ವದ ಪ್ರಯತ್ನವನ್ನು ಬೆಂಬಲಿಸುವುದಿಲ್ಲ. ಈ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಬೇಕು. ಅಮೆರಿಕ ಇಸ್ರೇಲ್‌ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಹೇಳಿದರು.