×
Ad

ಭಾರತೀಯ ರೆಸ್ಟೋರೆಂಟ್ ಗಳನ್ನು ಗುರಿಯಾಗಿಸಿಕೊಂಡು ಬ್ರಿಟನ್ ನಿಂದ ಟ್ರಂಪ್ ಶೈಲಿಯ ವಲಸೆ ವಿರೋಧಿ ಕಾರ್ಯಾಚರಣೆ

Update: 2025-02-11 13:06 IST

Photo credit: NDTV

ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೈಲಿನಲ್ಲಿ ಬ್ರಿಟನ್ ಕೂಡಾ ಕಠಿಣ ವಲಸೆ ವಿರೋಧಿ ಕಾರ್ಯಾಚರಣೆಗೆ ಮುಂದಾಗಿದ್ದು, ದೇಶದಲ್ಲಿ ಅಕ್ರಮವಾಗಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಬ್ರಿಟನ್ ನ ಲೇಬರ್ ಸರಕಾರವು ದಾಳಿ ನಡೆಸತೊಡಗಿದೆ. “UK wide blitz’ ಎಂದು ಬಣ್ಣಿಸಲಾಗಿರುವ ಈ ಕಾರ್ಯಾಚರಣೆಯು ವಲಸೆ ಕಾರ್ಮಿಕರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿರುವ ಭಾರತೀಯ ರೆಸ್ಟೋರೆಂಟ್ ಗಳು, ನೈಲ್ ಬಾರ್ ಗಳು, ಅಂಗಡಿಗಳು ಹಾಗೂ ಕಾರು ವಾಶ್ ಸೆಂಟರ್ ಗಳಿಗೂ ವಿಸ್ತರಣೆಯಾಗಿದೆ.

ಈ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ಖುದ್ದಾಗಿ ಬ್ರಿಟನ್ ಗೃಹ ಕಾರ್ಯದರ್ಶಿ ಯ್ವೆಟ್ಟೆ ಕೂಪರ್ ವಹಿಸಿದ್ದು, ಜನವರಿ ತಿಂಗಳಲ್ಲಿ ದಾಖಲೆ ಪ್ರಮಾಣದ 828 ಸ್ಥಳಗಳ ಮೇಲೆ ಗೃಹ ಕಚೇರಿಯು ದಾಳಿ ನಡೆಸಿದೆ. ಇದು ಹಿಂದಿನ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ, ಶೇ. 48ರಷ್ಟು ಅಧಿಕವಾಗಿದೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ 609 ಮಂದಿಯನ್ನು ಬಂಧಿಸಲಾಗಿದ್ದು, ಕಳೆದ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ, ಈ ಪ್ರಮಾಣ ಶೇ. 73ರಷ್ಟು ಅಧಿಕವಾಗಿದೆ ಎಂದು ವರದಿಯಾಗಿದೆ.

ಎಲ್ಲ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ವಲಸಿಗರ ವಿರುದ್ಧ ನಮ್ಮ ತಂಡಗಳು ಕ್ರಮ ಕೈಗೊಂಡಿದ್ದು, ಕಳೆದ ತಿಂಗಳ ಕಾರ್ಯಾಚರಣೆಯಲ್ಲಿ ಗಮನಾರ್ಹ ಪ್ರಮಾಣದ ದಾಳಿಗಳು ರೆಸ್ಟೋರೆಂಟ್ ಗಳು, ಸಿದ್ಧಾಹಾರ ಮಳಿಗೆಗಳು ಹಾಗೂ ಕೆಫೆಗಳಲ್ಲದೆ, ಆಹಾರ, ಪಾನೀಯ ಹಾಗೂ ತಂಬಾಕು ಉದ್ಯಮಗಳ ಮೇಲೆ ನಡೆದಿವೆ ಎಂದು ಕೂಪರ್ ಅವರ ಕಚೇರಿ ತಿಳಿಸಿದೆ. ಉತ್ತರ ಇಂಗ್ಲೆಂಡ್ ನ ಹಂಬರ್ಸೈಡ್ ನ ಭಾರತೀಯ ರೆಸ್ಟೋರೆಂಟ್ ಒಂದರ ಮೇಲೆ ನಡೆದ ದಾಳಿಯಲ್ಲೇ ಏಳು ಮಂದಿಯನ್ನು ಬಂಧಿಸಿ, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News