ಇಸ್ರೇಲ್ ನ ವಸಾಹತು ಯೋಜನೆ ಕಾನೂನುಬಾಹಿರ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿ ಖಂಡನೆ
PC : aljazeera.com
ವಿಶ್ವಸಂಸ್ಥೆ, ಆ.15: ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತು ಮತ್ತು ಪೂರ್ವ ಜೆರುಸಲೇಂ ಬಳಿ ಸಾವಿರಾರು ಹೊಸ ಮನೆಗಳನ್ನು ನಿರ್ಮಿಸುವ ಇಸ್ರೇಲ್ ನ ಯೋಜನೆಯು ಅಂತರಾಷ್ಟ್ರೀಯ ಕಾನೂನಿನಡಿ ಕಾನೂನುಬಾಹಿರವಾಗಿದೆ ಮತ್ತು ಸಮೀಪದ ಫೆಲೆಸ್ತೀನೀಯರನ್ನು ಬಲವಂತವಾಗಿ ಹೊರಹಾಕುವ ಅಪಾಯಕ್ಕೆ ಕಾರಣವಾಗಲಿದ್ದು ಇದನ್ನು ಯುದ್ಧಾಪರಾಧ ಎಂದು ವಿವರಿಸಬಹುದು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ(ಒಎಚ್‍ಸಿಎಚ್‍ಆರ್) ಖಂಡಿಸಿದೆ.
ದೀರ್ಘಾವಧಿಯಿಂದ ವಿಳಂಬವಾಗಿರುವ ವಸಾಹತು ಯೋಜನೆಯನ್ನು ಜಾರಿಗೊಳಿಸಲು ಒತ್ತಡ ಹೇರಲಿದ್ದು ಇದು ಫೆಲೆಸ್ತೀನ್ ರಾಷ್ಟ್ರದ ಪರಿಕಲ್ಪನೆಯನ್ನು ಹೂತುಹಾಕಲಿದೆ ಎಂದು ಇಸ್ರೇಲ್ ನ ವಿತ್ತಸಚಿವ ಬೆಝಾಲೆಲ್ ಸ್ಮೊಟ್ರಿಚ್ ಗುರುವಾರ ಹೇಳಿಕೆ ನೀಡಿದ್ದರು. ಈ ಯೋಜನೆಯು ಪಶ್ಚಿಮದಂಡೆಯನ್ನು ಪ್ರತ್ಯೇಕ ವಲಯಗಳಾಗಿ ವಿಭಜಿಸಲಿದೆ ಮತ್ತು ಆಕ್ರಮಿಸಿಕೊಂಡಿರುವ ಪ್ರದೇಶಕ್ಕೆ ತನ್ನ ಜನಸಂಖ್ಯೆಯನ್ನು ವರ್ಗಾಯಿಸುವುದು ಯುದ್ಧಾಪರಾಧವಾಗಿದೆ ಎಂದು ಒಎಚ್‍ಸಿಎಚ್‍ಆರ್ ವಕ್ತಾರರು ಹೇಳಿದ್ದಾರೆ.
ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ 2.7 ದಶಲಕ್ಷ ಫೆಲೆಸ್ತೀನೀಯರ ಜೊತೆ ಸುಮಾರು 7 ಲಕ್ಷ ಇಸ್ರೇಲಿ ವಸಾಹತುಗಾರರು ವಾಸಿಸುತ್ತಿದ್ದಾರೆ. ಇಸ್ರೇಲ್ 1980ರಲ್ಲಿ ಪೂರ್ವ ಜೆರುಸಲೇಂ ಅನ್ನು ಸ್ವಾಧೀನಪಡಿಸಿಕೊಂಡಿದ್ದು ಇದನ್ನು ಹೆಚ್ಚಿನ ದೇಶಗಳು ಮಾನ್ಯ ಮಾಡಿಲ್ಲ.