ಭಾರತ-ಪಾಕ್ ಒಪ್ಪಂದದಂತೆ ಇಸ್ರೇಲ್- ಇರಾನ್ ಒಪ್ಪಂದ ಮಾಡಿಸುವೆ: ಟ್ರಂಪ್
PC: x.com/TIME
ವಾಷಿಂಗ್ಟನ್: ಇಸ್ರೇಲ್ ನ ಮೇಲೆ ಇರಾನ್ ಸಿಡಿತಲೆ ಕ್ಷಿಪಣಿಗಳ ಮಳೆಗೆರೆದಿರುವ ನಡುವೆಯೇ ರವಿವಾರ ಈ ಸಂಬಂಧ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಧೀರ್ಘ ಸಂಘರ್ಷದಿಂದ ಜರ್ಜರಿತವಾಗಿರುವ ಮಧ್ಯಪ್ರಾಚ್ಯದಲ್ಲಿ ಶೀಘ್ರವೇ ಶಾಂತಿ ನೆಲೆಸಲಿದೆ ಎಂದು ಹೇಳಿಕೆ ನೀಡಿದ್ದಾರೆ. ಭಾರತದ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಶಸ್ತ್ರಸಮರವನ್ನು ನಿಲ್ಲಿಸಿ ಶಾಂತಿ ಒಪ್ಪಂದಕ್ಕೆ ಯಶಸ್ವಿ ಮಧ್ಯಸ್ಥಿಕೆ ವಹಿಸಿದ ಮಾದರಿಯಲ್ಲೇ ಇಸ್ರೇಲ್- ಇರಾನ್ ನಡುವೆಯೂ ಮಧ್ಯಸ್ಥಿಕೆ ವಹಿಸುವುದಾಗಿ ಅವರು ಹೇಳಿದ್ದಾರೆ.
ಶುಕ್ರವಾರ ಮುಂಜಾನೆ ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಕಾರ್ಯಾಚರಣೆ ಆರಂಭಿಸಿದ್ದು, ಇರಾನ್ ನ ಅಣುಸ್ಥಾವರ, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಪ್ರತಿದಾಳಿ ನಡೆಸಿದ್ದು, ಮತ್ತಷ್ಟು ಪ್ರಬಲ ದಾಳಿ ನಡೆಸುವ ಎಚ್ಚರಿಕೆ ನೀಡಿದೆ. ಇಸ್ರೇಲ್ ನ ರಾಜಧಾನಿಯ ಹೃದಯಭಾಗದವರೆಗೂ ಇರಾನ್ ಕ್ಷಿಪಣಿಗಳು ಅಪ್ಪಳಿಸಿವೆ. ಈ ಘಟನಾವಳಿಗಳ ಬೆನ್ನಲ್ಲೇ ಟ್ರಂಪ್ ಹೇಳಿಕೆ ಮಹತ್ವ ಪಡೆದಿದೆ.
ಅಮೆರಿಕದ ಆಸ್ತಿಗಳ ಮೇಲೆ ಇರಾನ್ ದಾಳಿ ಮಾಡಿದರೆ ತೀವ್ರ ಪ್ರತ್ಯುತ್ತರ ಎದುರಸಬೇಕಾಗತ್ತದೆ ಎಂದು ಟ್ರಂಪ್ ಕೆಲವೇ ಗಂಟೆಗಳ ಮುನ್ನ ಹೇಳಿಕೆ ನೀಡಿದ್ದರು. ಹಲವು ಕರೆಗಳು ಮತ್ತು ಸಭೆಗಳು ನಡೆಯುತ್ತಿದ್ದು, ಇಸ್ರೇಲ್- ಇರಾನ್ ನಡುವೆ ಶೀಘ್ರವೇ ಶಾಂತಿ ಸಾಧಿಸಲಾಗುವುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಪ್ರಥಮ ಅಧಿಕಾರಾವಧಿಯಲ್ಲಿ ಮಿಲಿಟರಿ ಸಂಘರ್ಷ ನಡೆದಿರುವುದನ್ನು ಉಲ್ಲೇಖಿಸಿದ ಅವರು, ಈ ಘಟನಾವಳಿಗಳಿಗೆ ಜೋ ಬೈಡೇನ್ ಅವರ ಅಧಿಕಾರಾವಧಿಯ ನೀತಿಗಳು ಕಾರಣ ಎಂಬ ಆರೋಪ ಮಾಡಿದರು.
"ಇರಾನ್ ಹಾಗೂ ಇಸ್ರೇಲ್ ಒಪ್ಪಂದಕ್ಕೆ ಬರಬೇಕು. ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಸಿದಂತೆ ಇಲ್ಲೂ ಒಪ್ಪಂದ ಮಾಡಿಸುತ್ತೇನೆ. ಭಾರತ-ಪಾಕ್ ಪ್ರಕರಣದಲ್ಲಿ ಅಮೆರಿಕದ ಜತೆಗಿನ ವ್ಯಾಪಾರ ಒಪ್ಪಂದದ ಕಾರಣದಿಂದ ಉಭಯ ದೇಶಗಳ ಶ್ರೇಷ್ಠ ನಾಯಕರು ಪರಸ್ಪರ ಶಾಂತಿಗೆ ಒಪ್ಪಿಕೊಂಡರು. ಅಂತೆಯೇ ನನ್ನ ಮೊದಲ ಅವಧಿಯಲ್ಲಿ ಸೆರ್ಬಿಯಾ ಹಾಗೂ ಕೊಸೊವೊ ನಡುವೆ ಹಲವು ವರ್ಷಗಳ ಸಂಘರ್ಷ ಇತ್ತು. ಇದು ಯುದ್ಧವಾಗಿ ಪರಿವರ್ತನೆಯಾಗುವ ಸ್ಥಿತಿ ಇತ್ತು. ನಾನು ಅದನ್ನು ನಿಲ್ಲಿಸಿದೆ" ಎಂದು ಟ್ರಂಪ್ ಟ್ರುಥ್ ಸೋಶಿಯಲ್ ನಲ್ಲಿ ಹೇಳಿಕೊಂಡಿದ್ದಾರೆ.