×
Ad

ಯೆಮನ್: ಹೌದಿಗಳ ನೆಲೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ

Update: 2025-07-07 23:06 IST

PHOTO | PTI (ಸಾಂದರ್ಭಿಕ ಚಿತ್ರ)

ಜೆರುಸಲೇಂ: ಯೆಮನ್‌ ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಹೊಡೈದಾ, ರಾಸ್ ಇಸಾ ಮತ್ತು ಸಲೀಫ್ ಬಂದರುಗಳನ್ನು ಹಾಗೂ ರಾಸ್ ಕಥೀಬ್ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಸೋಮವಾರ ಹೇಳಿದೆ.

ಇಸ್ರೇಲ್ ದಾಳಿಗೆ ಪ್ರತಿಯಾಗಿ ಇಸ್ರೇಲ್‍ನತ್ತ ಸರಣಿ ಕ್ಷಿಪಣಿ ದಾಳಿ ನಡೆಸಲಾಗಿದೆ. ಬೆನ್ ಗ್ಯುರಿಯಾನ್ ವಿಮಾನ ನಿಲ್ದಾಣ,ಅಷ್ಡೋಡ್ ಮತ್ತು ಐಲಾಟ್ ಬಂದರುಗಳು ಹಾಗೂ ಅಷ್ಕೆಲಾನ್‌ ನಲ್ಲಿನ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ತಮ್ಮ ವಾಯುರಕ್ಷಣಾ ವ್ಯವಸ್ಥೆಯು ಇಸ್ರೇಲ್‍ನ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಿದೆ ಎಂದು ಹೌದಿ ಮಿಲಿಟರಿ ವಕ್ತಾರ ಬ್ರಿ|ಜ| ಯಾಹ್ಯಾ ಸಾರೀ ಹೇಳಿದ್ದಾರೆ.

ರವಿವಾರ ತಡರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕೆಂಪು ಸಮುದ್ರ ತೀರದಲ್ಲಿರುವ ಹೊದೈದಾ, ರಾಸ್-ಇಸಾ ಮತ್ತು ಸಲೀಫ್ ಬಂದರುಗಳಿಗೆ ಹಾಗೂ ರಾಸ್ ಕಥೀಬ್ ವಿದ್ಯುತ್ ಸ್ಥಾವರಕ್ಕೆ ವ್ಯಾಪಕ ಹಾನಿಯಾಗಿದೆ. ಹೌದಿಗಳು ರವಿವಾರ ಇಸ್ರೇಲಿನ ಮೇಲೆ ಕನಿಷ್ಠ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಹೇಳಿದೆ. ಇರಾನ್ ಆಡಳಿತದಿಂದ ಶಸ್ತ್ರಾಸ್ತ್ರಗಳ ವರ್ಗಾವಣೆಗೆ ಈ ಬಂದರುಗಳನ್ನು ಹೌದಿ ಬಂಡುಕೋರ ಗುಂಪು ಬಳಸುತ್ತಿತ್ತು. ಬಳಿಕ ಈ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಹಾಗೂ ಅದರ ಮಿತ್ರರಾಷ್ಟ್ರಗಳ ವಿರುದ್ಧದ ಭಯೋತ್ಪಾದಕ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಪ್ರತಿಪಾದಿಸಿದೆ. ಕೆಂಪು ಸಮುದ್ರದಲ್ಲಿ ಹಡಗನ್ನು ಗುರಿಯಾಗಿಸಿ ಶಂಕಿತ ಹೌದಿಗಳ ದಾಳಿಯ ಬಳಿಕ ಹೌದಿಗಳ ನಿಯಂತ್ರಣದ ಪ್ರದೇಶದ ಮೇಲೆ ವೈಮಾನಿಕ ದಾಳಿ ನಡೆದಿದೆ. ಶಂಕಿತ ಹೌದಿಗಳ ದಾಳಿಯಿಂದ ಹಡಗು ಹಾನಿಗೊಂಡ ಕಾರಣ ಸಿಬ್ಬಂದಿಗಳು ಅದನ್ನು ಸಮುದ್ರದಲ್ಲಿ ತ್ಯಜಿಸಿದ್ದಾರೆ ಎಂದು ಐಡಿಎಫ್‍ನ ಲೆ|ಕ| ನಡಾವ್ ಶೊಶಾನಿ ಹೇಳಿದ್ದಾರೆ. `ಹೌದಿ ಗುಂಪಿಗೆ ಸೇರಿದ ಬಂದರುಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ನಿಖರ ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ. ಇಸ್ರೇಲ್ ವಿರುದ್ಧ ಹೌದಿಗಳ ಪುನರಾವರ್ತಿತ ಕ್ಷಿಪಣಿ ದಾಳಿ ಮತ್ತು ನಾಗರಿಕ ಮೂಲಸೌಕರ್ಯಗಳನ್ನು ವ್ಯವಸ್ಥಿತವಾಗಿ ಭಯೋತ್ಪಾದನೆಗೆ ಬಳಸುವುದರ ವಿರುದ್ಧ ಈ ದಾಳಿ ನಡೆಸಲಾಗಿದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News