×
Ad

ಅಂಬೇಡ್ಕರ್ ಅರಿವಿನ ವಿಶ್ವಕೋಶ: ವಿಜಯ್ ಸುರ್ವಾಡೆ

ವಿಜಯ್ ಸುರ್ವಾಡೆ ಅವರ ಮುಂಬೈನ ಕಲ್ಯಾಣ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಮನೆಯನ್ನು ನೀವು ಪ್ರವೇಶಿಸಿದರೆ, ಅಂಬೇಡ್ಕರ್ ಕುರಿತ ಫೋಟೊ, ಪುಸ್ತಕ, ಕರಪತ್ರ, ಪತ್ರ, ಪತ್ರಿಕಾ ತುಣುಕುಗಳು, ಅವರು ಬಳಸಿದ ವಸ್ತುಗಳ ಮ್ಯೂಝಿಯಂ ಪ್ರವೇಶಿಸಿದ ಅನುಭವವಾಗುತ್ತದೆ. ಮೈ ರೋಮಾಂಚನಗೊಂಡು ಅಂಬೇಡ್ಕರ್ ಬದುಕಿದ್ದ ಕಾಲಕ್ಕೆ ಮರಳಿದಂತಾಗುತ್ತದೆ.

Update: 2025-05-20 11:54 IST

ನಾನೊಮ್ಮೆ ಫೇಸ್‌ಬುಕ್‌ನಲ್ಲಿ ಅಂಬೇಡ್ಕರ್ ಅವರ ಅಪರೂಪದ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದ ಒಬ್ಬರ ಪೇಜ್ ಗಮನಿಸಿದೆ. ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ, ಸ್ವೀಕರಿಸಿದರು. ನಂತರ ಅವರ ಎಲ್ಲಾ ಪೋಸ್ಟ್‌ಗಳನ್ನು ಗಮನಿಸುತ್ತಾ ಹೋದೆ. ಅವರಿಗೆ ಅಂಬೇಡ್ಕರ್ ಓದು ಸರಣಿಯನ್ನು ಕಳಿಸುತ್ತಿದ್ದೆ. ಅವರು ಅದನ್ನು ಗಮನಿಸಿ ‘‘ನನಗೆ ಕನ್ನಡ ಬರಲ್ಲ. ಆದರೆ ನಿಮ್ಮ ಕೆಲಸ ಅರ್ಥವಾಗುತ್ತಿದೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ’’ ಎಂದು ಸಂದೇಶ ಕಳಿಸಿದರು. ಮುಂದೆ ಅಂಬೇಡ್ಕರ್ ಓದು ಸರಣಿ ನೂರು ಗಂಟೆ ತಲುಪಿದಾಗ ‘ದಿ ಹಿಂದು’ ಪತ್ರಿಕೆಯಲ್ಲಿ ಬಂದ ವರದಿಯನ್ನು ಕಳಿಸಿದ್ದೆ. ಅವರು ಓದಿ ಇದು ಅದ್ಭುತವಾದ ಕೆಲಸ ಮುಂದುವರಿಸಿ ಎಂದು ಶುಭ ಹಾರೈಸಿದ್ದರು. ಇವರು ಸಂಗ್ರಹಿಸಿದ ಬಹಳ ಅಪರೂಪದ ಹಳೆಯ ಫೋಟೊಗಳನ್ನು ನಾನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಅವರ ಅಭಿಮಾನಿಯಾದೆ. ಅವರು ಬೇರೆ ಯಾರೂ ಅಲ್ಲ ಅಂಬೇಡ್ಕರ್ ಬಗೆಗಿನ ನಡೆದಾಡುವ ವಿಶ್ವಕೋಶ ಎಂದು ಗುರುತಿಸುವ ಎಪ್ಪತ್ತೆರಡು ವರ್ಷದ ವಿಜಯ್ ಸುರ್ವಾಡೆ. ನಂತರ ಅವರ ಬಗೆಗೆ ತಿಳಿದು ಅವರ ಸಂದರ್ಶನಗಳನ್ನು ನೋಡುತ್ತಾ ಹೋದಂತೆ ಅವರೊಬ್ಬ ರಾಜಿ ಇಲ್ಲದ ನೈಜ ಅಂಬೇಡ್ಕರ್‌ವಾದಿ ಎನ್ನಿಸಿತು. ಈಗ ನಾವು ಬಳಸುತ್ತಿರುವ ಅಂಬೇಡ್ಕರ್ ಅವರ ಹಳೆಯ ಚಾರಿತ್ರಿಕ ಫೋಟೊ ಮತ್ತು ಇತರ ದಾಖಲೆಗಳು ಬಹುಪಾಲು ವಿಜಯ್ ಸುರ್ವಾಡೆ ಸಂಗ್ರಹಿಸಿದಂತಹವು. ಸುರ್ವಾಡೆ ಅವರೇ ಹೇಳುವಂತೆ ಅವರು ಸಂಗ್ರಹಿಸಿದ ಚಿತ್ರಗಳು ಸಾವಿರಕ್ಕಿಂತ ಹೆಚ್ಚಿವೆಯಂತೆ. ಹೀಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚಾರಿತ್ರಿಕವಾಗಿ ಅವರ ಚಿತ್ರಗಳೊಂದಿಗೆ ನಾವು ನೋಡುವುದರ ಹಿಂದೆ ವಿಜಯ ಸುರ್ವಾಡೆ ಅವರ ಅರ್ಧ ಶತಮಾನದ ಅಪೂರ್ವ ಪರಿಶ್ರಮವಿದೆ.

ಸುರ್ವಾಡೆ ಅವರ ಮುಂಬೈನ ಕಲ್ಯಾಣ್‌ನಲ್ಲಿರುವ ಅಪಾರ್ಟ್ ಮೆಂಟ್‌ನ ಮನೆಯನ್ನು ನೀವು ಪ್ರವೇಶಿಸಿದರೆ, ಅಂಬೇಡ್ಕರ್ ಕುರಿತ ಫೋಟೊ, ಪುಸ್ತಕ, ಕರಪತ್ರ, ಪತ್ರ, ಪತ್ರಿಕಾ ತುಣುಕುಗಳು, ಅವರು ಬಳಸಿದ ವಸ್ತುಗಳ ಮ್ಯೂಝಿಯಂ ಪ್ರವೇಶಿಸಿದ ಅನುಭವವಾಗುತ್ತದೆ. ಮೈ ರೋಮಾಂಚನಗೊಂಡು ಅಂಬೇಡ್ಕರ್ ಬದುಕಿದ್ದ ಕಾಲಕ್ಕೆ ಮರಳಿದಂತಾಗುತ್ತದೆ. ಈ ಮನೆಯಲ್ಲಿಯೇ ಅಂಬೇಡ್ಕರ್ ಈಗಲೂ ವಾಸ ಮಾಡುತ್ತಿರಬಹುದೇ ಎನ್ನುವಷ್ಟು ಬೆರಗು ಮೂಡುತ್ತದೆ.

ವಿಜಯ್ ಸುರ್ವಾಡೆ ಅವರಿಗೆ ದಕ್ಕಿದ ಅಂಬೇಡ್ಕರ್ ಅವರ ಬಗೆಗಿನ ಹುಡುಕಾಟದ ಸ್ಫೂರ್ತಿಯ ಕತೆ ಕುತೂಹಲಕಾರಿಯಾಗಿದೆ. ವಿಜಯ್ ಸುರ್ವಾಡೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸವಾಲ್ ಗ್ರಾಮದಲ್ಲಿ 1953ರಲ್ಲಿ ಜನಿಸುತ್ತಾರೆ. ಸುರ್ವಾಡೆ ಅವರ ತಾಯಿಯ ಅಜ್ಜ ಸಖರಾಮ್ ಸೇನು ಸೊನವಾನೆ ಅವರು 1956ರಲ್ಲಿ ನಾಗಪುರದಲ್ಲಿ ಬಾಬಾಸಾಹೇಬರಿಂದ ಬೌದ್ಧ ದೀಕ್ಷೆ ಪಡೆದವರು. ಇಬ್ಬರು ಚಿಕ್ಕಪ್ಪ, ರಾಜಧರ್ ರಾವ್ಜಿ ಸುರ್ವಾಡೆ ಮತ್ತು ಗಿರಿಧರ್ ರಾವ್ಜಿ ಸುರ್ವಾಡೆ ಅವರು ಬಾಬಾಸಾಹೇಬ್ ಮತ್ತು ಅವರ ಪರಂಪರೆಯ ಬಗ್ಗೆ ಬಾಲಕ ವಿಜಯ್ ಅವರಲ್ಲಿ ಕುತೂಹಲ ಮೂಡಿಸಿದರು. ಆಗಿನಿಂದಲೇ ಸುರ್ವಾಡೆ ಅವರು ಅಂಬೇಡ್ಕರ್ ಚಿತ್ರಗಳು ಅಚ್ಚಾದ ಮದುವೆಯ ಆಮಂತ್ರಣ ಪತ್ರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಅವರು 1970ರಲ್ಲಿ ಮುಂಬೈನ ಸಿದ್ಧಾರ್ಥ್ ಕಾಲೇಜಿಗೆ ಸೇರಿದಾಗ ದಲಿತ ಚಳವಳಿಯ ಸಂಪರ್ಕಕ್ಕೆ ಬರುತ್ತಾರೆ. ವಾಡ್ಲಾದ ಸಿದ್ಧಾರ್ಥ್ ವಿಹಾರದ ಹಾಸ್ಟೆಲ್‌ನಲ್ಲಿರುವಾಗ ಸುರ್ವಾಡೆ ಅವರಿಗೆ ಮಹಾರಾಷ್ಟ್ರದ ದಲಿತ ಕವಿಗಳು, ಬರಹಗಾರರು, ಚಿಂತಕರು ಮತ್ತು ಚಳವಳಿಯ ಕಾರ್ಯಕರ್ತರ ಗಾಢವಾದ ಸಂಪರ್ಕ ಬೆಳೆಯುತ್ತದೆ. ಮುಂದೆ ಸೈರಾದಲ್ಲಿ 1972ರಲ್ಲಿ ಸ್ಥಾಪಿಸಲಾದ ದಲಿತ ಪ್ಯಾಂಥರ್ ಮತ್ತಷ್ಟು ಸೆಳೆಯುತ್ತದೆ. ಈ ಸಮಯದಲ್ಲಿ ಅವರು ಬಾಬಾಸಾಹೇಬರ ಎರಡನೇ ಪತ್ನಿ ಸವಿತಾ ಅಂಬೇಡ್ಕರ್ ಅವರನ್ನು ಭೇಟಿಯಾಗುತ್ತಾರೆ. ಮಾಯಿಸಾಹೇಬ್ ಎಂದು ಅವರನ್ನು ಗೌರವಿಸುತ್ತಾರೆ. ಮುಂದೆ ಸವಿತಾ ಅಂಬೇಡ್ಕರ್ ಅವರ ಆಪ್ತ ವಲಯದಲ್ಲಿ ಒಬ್ಬರಾಗುತ್ತಾರೆ. ಇದು ಅಂಬೇಡ್ಕರ್ ಅವರ ಹುಡುಕಾಟಕ್ಕೆ ಬಹಳ ಸಹಾಯಕವಾಗುತ್ತದೆ.

ಸುರ್ವಾಡೆ ಅವರು 1978ರಿಂದ 2013ರ ವರೆಗೆ ಐಡಿಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾ, ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದೇ ಅಂಬೇಡ್ಕರ್ ಬಗೆಗಿನ ಹುಡುಕಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಸುರ್ವಾಡೆ ಅವರ ಈ ಹುಡುಕಾಟವು ಅವರನ್ನು ಮಹಾರಾಷ್ಟ್ರದ ಉದ್ದಗಲಕ್ಕೂ ಸುತ್ತಾಡಿಸುತ್ತದೆ. ಅಷ್ಟೇ ಅಲ್ಲದೆ ದಿಲ್ಲಿ, ಲಕ್ನೊ, ಆಗ್ರಾ, ಇಂದೋರ್, ಭೋಪಾಲ್, ಅಹಮದಾಬಾದ್, ಮೊವ್ ಮುಂತಾದ ಕಡೆಗಳಲ್ಲೆಲ್ಲಾ ಅಲೆಯುತ್ತಾರೆ. ಕೊನೆಗೆ ಅಂಬೇಡ್ಕರ್ ಓದಿದ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೂ ಭೇಟಿ ನೀಡುತ್ತಾರೆ. ಹಳೆಯ ಫೋಟೊಗಳು ಸಿಕ್ಕಾಗ ಆ ಫೋಟೊಗಳಲ್ಲಿ ಅಚ್ಚಾಗಿದ್ದ ಫೋಟೊ ಸ್ಟುಡಿಯೋದ ಹೆಸರುಗಳನ್ನು ಪತ್ತೆಹಚ್ಚಿ ಮುಚ್ಚಿಹೋಗಿದ್ದ ಫೋಟೊ ಸ್ಟುಡಿಯೋಗಳನ್ನು ಶೋಧಿಸಿದ್ದಾರೆ. ಅಂತಹ ಸ್ಟುಡಿಯೋಗಳ ಸ್ಟಾಕ್ ರೂಮುಗಳಲ್ಲಿ ಕೆಲಸಕ್ಕೆ ಬಾರದ ವಸ್ತುಗಳಂತೆ ಬಿಸಾಕಿದ್ದ ಫಿಲ್ಮ್ ರೋಲ್‌ಗಳನ್ನು ಪತ್ತೆ ಹಚ್ಚಿ ಧೂಳು ಕೊಡವಿ ಅವುಗಳನ್ನು ಡೆವಲಪ್ ಮಾಡಿಸಿದ್ದಾರೆ. ಅಂಬೇಡ್ಕರ್ ಫೋಟೊ ಕರಪತ್ರ ಸಂಗ್ರಹಿಸಿಟ್ಟಿದ್ದ ಇತರ ಸಂಗ್ರಾಹಕರನ್ನು ಭೇಟಿಮಾಡಿ ಅವರನ್ನು ಮನವೊಲಿಸಿ ಕೆಲವು ಮುಖ್ಯ ದಾಖಲೆಗಳನ್ನು ಪಡೆದಿದ್ದಾರೆ.

ಅಂಬೇಡ್ಕರ್ ಕುರಿತ ಐದು ದಶಕಗಳ ನಿರಂತರ ಹುಡುಕಾಟದ ಫಲವಾಗಿ ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಹದಿನೇಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶೇಷವೆಂದರೆ, ಅವುಗಳಲ್ಲಿ ಒಂಭತ್ತು ಫೋಟೊ ಆಲ್ಬಮ್‌ಗಳಾಗಿವೆ. ಡಾ. ನರೇಂದ್ರ ಜಾಧವ್ ಅವರ ಪಠ್ಯದೊಂದಿಗೆ ಕೆಲವು ಛಾಯಾಚಿತ್ರಗಳ ಕಾಫಿ ಟೇಬಲ್ ಪುಸ್ತಕವನ್ನು ತಂದಿದ್ದಾರೆ. 1996ರಲ್ಲಿ ಪುಣೆಯಲ್ಲಿ ಸಿಂಬಿಯಾಸಿಸ್ ಸೊಸೈಟಿ ಮತ್ತು 2021ರಲ್ಲಿ ನವಿ ಮುಂಬೈ ಕಾರ್ಪೊರೇಶನ್ ಸ್ಥಾಪಿಸಿದ ವಸ್ತುಸಂಗ್ರಹಾಲಯಗಳಿಗೆ ಹಲವು ಪ್ರಮುಖ ದಾಖಲೆಗಳನ್ನು ಕೊಡುಗೆ ನೀಡಿದ್ದಾರೆ. ಸುರ್ವಾಡೆ ಅವರ ಮಹತ್ವ ಎಂತಹದ್ದೆಂದರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡುವ ಪ್ರತಿಯೊಬ್ಬ ಸಂಶೋಧಕರೂ ಮುಂಬೈನ ಸುರ್ವಾಡೆಯ ಕಲ್ಯಾಣದಲ್ಲಿನ ಅಪಾರ್ಟಮೆಂಟ್‌ಗೆ ಭೇಟಿ ಕೊಡಬೇಕಾಗುತ್ತದೆ. ಅಥವಾ ಸುರ್ವಾಡೆಯವರನ್ನು ಭೇಟಿ ಮಾಡದ ಅಂಬೇಡ್ಕರ್ ಕುರಿತ ಅಧ್ಯಯನಗಳು ಅಷ್ಟರ ಮಟ್ಟಿಗೆ ಅಪೂರ್ಣ ಎನ್ನುವುದು ವಿದ್ವಾಂಸರ ಅಭಿಪ್ರಾಯವಾಗಿದೆ. ಸುರ್ವಾಡೆ ಅವರ ಫ್ಲ್ಯಾಟ್ ಬಾಬಾ ಸಾಹೇಬರ ಫೋಟೊಗಳು, ಪತ್ರಿಕಾ ಸಂಗ್ರಹ, ಕರಪತ್ರ, ಪತ್ರಿಕಾ ತುಣುಕುಗಳ ಜೊತೆಗೆ ಸವಿತಾ ಅವರು 2001ರಲ್ಲಿ ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ಬಳಸಿದ ಕೆಲವು ಅಮೂಲ್ಯ ವಸ್ತುಗಳಿಂದ ಕಿಕ್ಕಿರಿದಿದೆ. ಇದರಲ್ಲಿ ಬಾಬಾಸಾಹೇಬರ ದಂತಗಳು, ಚಿನ್ನದ ಅಂಚುಗಳ ಕನ್ನಡಕದ ಚೌಕಟ್ಟುಗಳು, ಕರೆ ಕಾರ್ಡ್‌ಗಳು, ಚಿನ್ನ ಲೇಪಿತ ಸ್ವಿಸ್ ವಾಚ್ (ಮೊವಾಡೋ) ಸೇರಿವೆ.

ಸುರ್ವಾಡೆ ಅವರು ಮಾತನಾಡುತ್ತಾ, ‘‘ಫೋಟೊ ಮತ್ತು ದಾಖಲೆಗಳನ್ನು ಸಂಗ್ರಹಿಸುವಾಗ ಕೆಲವರು ಅವುಗಳನ್ನು ನನಗೆ ಕೊಡಲು ಹಣದ ಬೇಡಿಕೆ ಇಡುತ್ತಿದ್ದರು. ಅಂತಹ ಸಂದರ್ಭದಲ್ಲಿ ನಾನು ಬಡವನಾಗಿದ್ದರಿಂದ ನನ್ನ ಬಳಿ ಹಣವಿರುತ್ತಿರಲಿಲ್ಲ. ನನ್ನ ತಾಯಿ ನಾನು ಎಂಟನೇ ತರಗತಿ ಓದುವಾಗಲೇ ತೀರಿದ್ದರು. ನನ್ನ ತಂದೆ ಪುರಸಭೆಯಲ್ಲಿ ಗುಮಾಸ್ತರಾಗಿದ್ದರು. ಅವರು ನನ್ನ ವಿದ್ಯಾಭ್ಯಾಸಕ್ಕೆಂದು ಸ್ವಲ್ಪ ಹಣ ಕಳಿಸುತ್ತಿದ್ದರು. ನಾನು ಅದೇ ಹಣವನ್ನು ಕೂಡಿಟ್ಟುಕೊಂಡು ಅಂಬೇಡ್ಕರ್ ಅವರ ಫೋಟೊ ಮತ್ತು ದಾಖಲೆಗಳನ್ನು ಪಡೆಯುವುದಕ್ಕಾಗಿ ವಿನಿಯೋಗಿಸುತ್ತಿದ್ದೆ’’ ಎನ್ನುತ್ತಾರೆ. ‘‘ದಾದರ್‌ನಲ್ಲಿ ಬಾಬಾ ಸಾಹೇಬರ ಮನೆಯ ಬಳಿ ‘ದಿಲ್ ಸ್ಟುಡಿಯೋ’ ಇತ್ತು. ಅಲ್ಲಿ ಹಲವಾರು ಛಾಯಾಚಿತ್ರಗಳಿದ್ದವು. ನೆಗೆಟಿವ್‌ಗಳು ದೊಡ್ಡ ಗಾತ್ರದ್ದಾಗಿದ್ದವು. ಅವುಗಳನ್ನು ಪಡೆಯುವುದಕ್ಕೆ ಪಡಬಾರದ ಕಷ್ಟ ಪಟ್ಟಿರುವೆ. ಈ ಹುಡುಕಾಟದಲ್ಲಿ ನೂರಾರು ವ್ಯಕ್ತಿಗಳು, ಸಂಸ್ಥೆಗಳು, ಬಾಬಾ ಸಾಹೇಬರು ಭೇಟಿಕೊಟ್ಟಿದ್ದ ಹಳ್ಳಿಗಳು ಎಲ್ಲಾ ಕಡೆಗಳಲ್ಲಿ ಸುತ್ತಿದ್ದೇನೆ’’ ಎನ್ನುತ್ತಾರೆ.

ಇದೀಗ ಸವಿತಾ ಅಂಬೇಡ್ಕರ್ ಬಗೆಗೆ ಮಾತನಾಡುವ ಅಧಿಕೃತ ವ್ಯಕ್ತಿಗಳಲ್ಲಿ ಸುರ್ವಾಡೆ ಪ್ರಮುಖರು. ಸವಿತಾ ಅವರ ಬಗ್ಗೆ ಇದ್ದ ಆರೋಪಗಳ ಬಗ್ಗೆ ಸುರ್ವಾಡೆ ಮಾತನಾಡುತ್ತಾ, ‘‘ನಾನು ಬಾಲ್ಯದಿಂದಲೂ ಹಲವು ಆರೋಪಗಳನ್ನು ಕೇಳುತ್ತಿದ್ದೇನೆ. ಕೆಲವರು ಮಜ್ಜಿಗೆಯಲ್ಲಿ ವಿಷ ಹಾಕಿದಳು ಎನ್ನುತ್ತಾರೆ, ಮತ್ತೆ ಕೆಲವರು ಸ್ಲೋ ಪಾಯಿಸನ್ ಕೊಟ್ಟಿದ್ದಾಳೆ ಎನ್ನುತ್ತಾರೆ. ಲೋಖಂಡೆ ಅಂತಹವರು ಇನ್ನೂ ಮುಂದುವರಿದು ಸಾಹೇಬರನ್ನು ದಿಂಬಿನಿಂದ ಉಸಿರುಕಟ್ಟಿಸಿ ಕೊಂದಳು ಎನ್ನುತ್ತಾರೆ. ಹಾಗೆ ಮಾಡಲು ಬಾಬಾ ಸಾಹೇಬರು ಅಷ್ಟು ಚಿಕ್ಕ ಮಗುವೇ? ಮಾಯಿ ಸಾಹೇಬ ಏಕಕಾಲಕ್ಕೆ ವೈದ್ಯೆಯಾಗಿಯೂ, ಹೆಂಡತಿಯಾಗಿಯೂ ಜವಾಬ್ದಾರಿ ನಿರ್ವಹಿಸಬೇಕಿತ್ತು. ಅವರ ವಿಶ್ರಾಂತಿಯ ಸಮಯದಲ್ಲಿ ಯಾರ ಭೇಟಿಗೂ ಅವಕಾಶ ಕೊಡುತ್ತಿರಲಿಲ್ಲ. ಔಷಧ, ಆರೋಗ್ಯ, ಆಹಾರ ಮತ್ತು ವಿಶ್ರಾಂತಿಯ ಕಾರಣಕ್ಕೆ ಬಾಬಾ ಸಾಹೇಬರಿಗೆ ಅಗತ್ಯವಿರುವ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹೀಗೆ ಬಾಬಾ ಸಾಹೇಬರ ಆರೋಗ್ಯದ ಕಾಳಜಿಯ ಕಾರಣಕ್ಕೆ ತೆಗೆದುಕೊಳ್ಳುತ್ತಿದ್ದ ಕಠಿಣ ನಿರ್ಧಾರಗಳು ಇಲ್ಲಸಲ್ಲದ ಪುಕಾರುಗಳನ್ನು ಹುಟ್ಟಿಸಿವೆ, ಇವೆಲ್ಲಾ ಆಧಾರ ರಹಿತ ಮಾತುಗಳಾಗಿವೆ’’ ಎನ್ನುತ್ತಾರೆ. 1947 ಮತ್ತು 1948ರ ಅವಧಿಯಲ್ಲಿ ಬಾಬಾ ಸಾಹೇಬರು ಮತ್ತು ಸವಿತಾ ಪರಸ್ಪರ ಸುಮಾರು 40-50 ಪತ್ರಗಳನ್ನು ಬರೆದುಕೊಂಡಿದ್ದಾರೆ. ಈ ಎಲ್ಲಾ ಪತ್ರಗಳನ್ನು ಸ್ವತಃ ಸವಿತಾ ಅವರೇ ಸುರ್ವಾಡೆಯವರಿಗೆ ತೋರಿಸಿದ್ದರು. ತುಂಬಾ ಖಾಸಗಿ ವಿಷಯಗಳಿರುವ ಪತ್ರಗಳನ್ನು ಓದಲು ಅನುಮತಿಸಿರಲಿಲ್ಲ. ಈ ದೇಶದ ದಮನಿತ ಸಮುದಾಯಗಳಿಗಾಗಿ ಬದುಕಿನ ಪ್ರತೀ ಕ್ಷಣವನ್ನೂ ಮೀಸಲಿಟ್ಟ ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಎಷ್ಟು ಕೆಲಸ ಮಾಡಿದರೂ ಸಾಲದು ಎನ್ನುವುದು ಸುರ್ವಾಡೆ ಅವರ ನಿಲುವು. ಹಾಗಾಗಿಯೇ ಅವರ ಜೀವಿತಾವಧಿಯ ಹೆಚ್ಚು ಸಮಯ ಅಂಬೇಡ್ಕರ್ ಕುರಿತ ಸಂಶೋಧನೆಗಾಗಿ ಮುಡಿಪಿಟ್ಟಿದ್ದಾರೆ.

ಜವಾಹರಲಾಲ್ ನೆಹರೂ ಅವರ ಆಪ್ತ ಸಹಾಯಕ ಪುಷ್ಪಮ್ ಪಟ್ಕೆ ಅವರು ‘ಮಾನ್ ಅಪಮಾನ್’ ಎಂಬ ನಾಟಕ ನೋಡಲು ಅಂಬೇಡ್ಕರ್ ಅವರನ್ನು ಆಹ್ವಾನಿಸಿದ್ದರು. ಹಾಸ್ಯಮಯವಾಗಿದ್ದ ಈ ನಾಟಕ ನೋಡುತ್ತಾ ಅಂಬೇಡ್ಕರ್ ನಗಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸೆರೆಹಿಡಿದ ಫೋಟೊವನ್ನು ಪಟ್ಕೆ ಅವರು ತನಗೆ ಕೊಟ್ಟಿದ್ದಾಗಿ ಸುರ್ವಾಡೆ ಅವರು ಹೇಳುತ್ತಾರೆ. ಹೀಗೆ ಸುರ್ವಾಡೆ ಸಂಗ್ರಹಿಸಿದ ಒಂದೊಂದು ಫೋಟೊದ ಬಗ್ಗೆಯೂ ಒಂದೊಂದು ಅನುಭವದ ಕಥೆ ಹೇಳುತ್ತಾರೆ. ಸುವಾರ್ಡೆ ಅವರು ‘‘ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬ ಮಹಾನ್ ವ್ಯಕಿ. ಆದರೆ ಅವರ ಕೆಲವು ಅನುಯಾಯಿಗಳು ಅವರ ಹೆಸರನ್ನು ಕುಬ್ಜಗೊಳಿಸಿದ್ದಾರೆ’’ ಎಂದು ನೋವಿನಿಂದ ನುಡಿಯುತ್ತಾರೆ. ಅಂಬೇಡ್ಕರ್ ಅವರ ಬಗೆಗೆ ಸಂಶೋಧನೆ ಮಾಡುವವರೆಲ್ಲಾ ಸುರ್ವಾಡೆಯವರು ಕೊಟ್ಟ ಮಾಹಿತಿ ಮತ್ತು ದಾಖಲೆಗಳಿಗಾಗಿ ಕೃತಜ್ಞತೆ ಸಲ್ಲಿಸುತ್ತಾರೆ. ಆದರೆ 2023ರಲ್ಲಿ ನವಯಾನ ಪ್ರಕಾಶನದಿಂದ ಪ್ರಕಟವಾದ ಅಶೋಕ್ ಗೋಪಾಲ್ ಅವರ ‘ಎ ಪಾರ್ಟ್‌ ಅಪಾರ್ಟ್‌: ದ ಲೈಫ್ ಆಂಡ್ ಥಾಟ್ ಆಫ್ ಬಿ.ಆರ್.ಅಂಬೇಡ್ಕರ್’ ಎಂಬ ಮಹತ್ವದ ಕೃತಿಯಲ್ಲಿ ಅಶೋಕ್ ಗೋಪಾಲ್ ಪುಸ್ತಕದ ಕೊನೆಗೆ ಸುರ್ವಾಡೆ ಅವರ ಬಗ್ಗೆ ಅಪರೂಪದ ಪರಿಚಯದೊಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೀಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚರಿತ್ರೆಯ ದಾಖಲಾತಿಗಾಗಿ ತನ್ನನ್ನೇ ತೇದುಕೊಂಡ ವಿಜಯ ಸುರ್ವಾಡೆ ಅವರು ಇನ್ನೂ ನೂರು ಕಾಲ ಆರೋಗ್ಯದಿಂದಿರಲಿ ಎಂದು ಹಾರೈಸೋಣ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News