×
Ad

ಬಾನು ಮುಷ್ತಾಕ್ ಕಥೆಗಳನ್ನು ಓದಿಸಲು ‘ಬೂಕರ್’ ಬರಬೇಕಾಯಿತು...

ಬೂಕರ್ ಪ್ರಶಸ್ತಿ ಪ್ರಕಟವಾದ ನಂತರ ಕನ್ನಡದಲ್ಲಿ ಬರೆದ ಬಹುಪಾಲು ಬರಹಗಳನ್ನು ಗಮನಿಸಿದೆ. ಅದರಲ್ಲಿ ಬಾನು ಮುಷ್ತಾಕ್ ಅವರ ಬಗ್ಗೆ ಅಂತರ್ಜಾಲದಲ್ಲಿ ಲಭ್ಯವಿದ್ದ ಮಾಹಿತಿಗಳನ್ನು ಆಧರಿಸಿ ಪ್ರದಕ್ಷಿಣೆ ಮಾಡಿದಂತಹ ಅಭಿಪ್ರಾಯಗಳು ಹೊಮ್ಮಿದವು. ಇದು ಕನ್ನಡದಲ್ಲಿ ಬಾನು ಮುಷ್ತಾಕ್ ಅವರ ಕಥೆಗಳ ಓದಿನ ಬಡತನ ಎಷ್ಟಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಿಸಿದ ‘ಹಸೀನಾ ಮತ್ತು ಇತರ ಕಥೆಗಳು’ ಸಂಕಲನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದನ್ನು ನೋಡಿದರೆ ಕನ್ನಡಿಗರಿಗೆ ಬಾನು ಮುಷ್ತಾಕ್ ಅವರ ಕಥೆಗಳನ್ನು ಓದಿಸಲು ಬೂಕರ್ ಬರಬೇಕಾಯಿತು ಅನ್ನಿಸಿತು.

Update: 2025-05-27 10:38 IST

ಲಂಡನ್‌ನಲ್ಲಿ 2025ರ ಬೂಕರ್ ಘೋಷಣೆಯಾಗುತ್ತಿದ್ದನ್ನು ಬೂಕರ್ ವೆಬ್‌ಸೈಟಿನ ಲೈವ್ ಸ್ಟ್ರೀಮಿನಲ್ಲಿ ಕೇಳುತ್ತಿದ್ದಂತೆ ತಡರಾತ್ರಿ 2:30 ರ ಸಮಯದಲ್ಲೆ ಒಬ್ಬನೇ ಚೀರಿ ಸಂಭ್ರಮಿಸಿದ್ದೆ. ಜಗತ್ತಿನ ಸಾಹಿತ್ಯ ವಲಯ ಬಾನುಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರ ಹೆಸರುಗಳನ್ನು ಕೇಳಿಸಿಕೊಂಡಿತ್ತು. ಕನ್ನಡವನ್ನು ಬೂಕರ್ ಮಟ್ಟಕ್ಕೆ ಏರಿಸಿದ ಬಾನು ಮುಷ್ತಾಕ್ ಮತ್ತು ಸಮರ್ಥವಾಗಿ ಅನುವಾದಿಸಿದ ದೀಪಾ ಭಾಸ್ತಿ ಅವರು ಎಲ್ಲರ ಕಣ್ಣಲ್ಲಿ ಮಿಂಚಿದರು. ಇಂತಹದ್ದೊಂದು ಅವಿಸ್ಮರಣೀಯ ಘಟನೆಯನ್ನು ಕಣ್ತುಂಬಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಆ ನಂತರದ ಬೆಳವಣಿಗೆಯನ್ನು ನೀವು ಗಮನಿಸಿದ್ದೀರಿ. ಇಡೀ ಜಗತ್ತಿನ ಸಾಹಿತ್ಯಾಸಕ್ತರು ಬಾನು ಮತ್ತು ದೀಪಾ ಜೋಡಿಯನ್ನು ಮನಸಾರೆ ಅಭಿನಂದಿಸಿದರು. ಕನ್ನಡದ ಪತ್ರಿಕಾ ಮಾಧ್ಯಮವೂ ಸಂಭ್ರಮಿಸಿ ಪುಟಗಟ್ಟಲೆ ಬರೆದರು. ಬಾನು-ದೀಪಾ ಜೋಡಿ ನನಗೆ ಶಿಶುನಾಳ ಶರೀಫ ಮತ್ತು ಗೋವಿಂದಭಟ್ಟರ ಜೋಡಿಯನ್ನು ನೆನಪಿಸಿತು.

ಬಾನು ಮುಷ್ತಾಕ್ ಅವರ ‘ಬಡವರ ಮಗಳು ಹೆಣ್ಣಲ್ಲ’ ಕಥಾ ಸಂಕಲನದ ಬಗ್ಗೆ ಮಾತನಾಡುವ ಕಾರಣಕ್ಕೆ ಅವರ ಕಥಾ ಜಗತ್ತಿಗೆ 2013ರಲ್ಲಿ ನಾನು ಪ್ರವೇಶ ಪಡೆದೆ. ಆ ನಂತರ ಪ್ರಕಟವಾದ ‘ಹಸೀನಾ ಮತ್ತು ಇತರ ಕಥೆಗಳು’ ಸಮಗ್ರ ಕಥೆಗಳನ್ನು ಓದುತ್ತಾ ಬಾನು ಅವರ ಕಥಾ ಜಗತ್ತಿನ ಒಳಗಣ ಲೋಕವನ್ನು ಪ್ರವೇಶಿಸಿದ್ದೆ. ಬೂಕರ್ ಪ್ರಶಸ್ತಿ ಪ್ರಕಟವಾದ ನಂತರ ಕನ್ನಡದಲ್ಲಿ ಬರೆದ ಬಹುಪಾಲು ಬರಹಗಳನ್ನು ಗಮನಿಸಿದೆ. ಅದರಲ್ಲಿ ಬಾನು ಮುಷ್ತಾಕ್ ಅವರ ಬಗ್ಗೆ ಅಂತರ್ಜಾಲದಲ್ಲಿ ಲಭ್ಯವಿದ್ದ ಮಾಹಿತಿಗಳನ್ನು ಆಧರಿಸಿ ಪ್ರದಕ್ಷಿಣೆ ಮಾಡಿದಂತಹ ಅಭಿಪ್ರಾಯಗಳು ಹೊಮ್ಮಿದವು. ಇದು ಕನ್ನಡದಲ್ಲಿ ಬಾನು ಮುಷ್ತಾಕ್ ಅವರ ಕಥೆಗಳ ಓದಿನ ಬಡತನ ಎಷ್ಟಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿತು. ಮೈಸೂರಿನ ಅಭಿರುಚಿ ಪ್ರಕಾಶನ ಪ್ರಕಟಿಸಿದ ‘ಹಸೀನಾ ಮತ್ತು ಇತರ ಕಥೆಗಳು’ ಸಂಕಲನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದನ್ನು ನೋಡಿದರೆ ಕನ್ನಡಿಗರಿಗೆ ಬಾನು ಮುಷ್ತಾಕ್ ಅವರ ಕಥೆಗಳನ್ನು ಓದಿಸಲು ಬೂಕರ್ ಬರಬೇಕಾಯಿತು ಅನ್ನಿಸಿತು. ಕಾರಣ ಕೆಲವು ಬರಹಗಳನ್ನು ಹೊರತು ಪಡಿಸಿದರೆ ಬಾನುಮುಷ್ತಾಕ್ ಕಥೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದದ್ದು ಬಹಳ ಕಡಿಮೆ. ಬಹುಶಃ ಬೂಕರ್ ಪ್ರಶಸ್ತಿಯು ಇನ್ನಾದರೂ ಬಾನು ಅವರ ಕಥೆಗಳನ್ನು ಓದಿ ಎಂದು ಮನವಿ ಮಾಡಿದಂತಾಗಿದೆ.

ಇದೀಗ ಬೂಕರ್ ಪ್ರಶಸ್ತಿ ಪಡೆದ ‘ಹಾರ್ಟ್ ಲ್ಯಾಂಪ್’ (ಎದೆಯ ಹಣತೆ) ಕಥಾ ಸಂಕಲನ ಬಾನು ಮಷ್ತಾಕ್ ಅವರ ಕಥಾ ಪಯಣದ ಒಂದೊಂದು ಹೆಜ್ಜೆಯನ್ನು ಆಯ್ದುಕೊಂಡು ರೂಪುಗೊಂಡಿದೆ. 1990ರಲ್ಲಿ ಪ್ರಕಟವಾದ ‘ಹೆಜ್ಜೆ ಮೂಡಿದ ಹಾದಿ’ ಸಂಕಲನದಿಂದ ‘ಶಹಿಸ್ತ ಮಹಲ್‌ನ ಕಲ್ಲು ಚಪ್ಪಡಿಗಳು’ ಕಥೆಯನ್ನೂ, 1999ರಲ್ಲಿ ಪ್ರಕಟವಾದ ‘ಬೆಂಕಿಮಳೆ’ ಕಥಾ ಸಂಕಲನದಿಂದ ‘ಬೆಂಕಿಮಳೆ’, ‘ಕರಿನಾಗರಗಳು’, ‘ಹೃದಯದ ತೀರ್ಪು’, ‘ಕೆಂಪು ಲುಂಗಿ’ ಕಥೆಗಳನ್ನೂ, 2004ರಲ್ಲಿ ಪ್ರಕಟವಾದ ‘ಎದೆಯ ಹಣತೆ’ (ಹಾರ್ಟ್ ಲ್ಯಾಂಪ್) ಕಥಾ ಸಂಕಲನದಿಂದ ‘ಎದೆಯ ಹಣತೆ’, ‘ಹೈಹೀಲ್ಡ್ ಶೂ’, ‘ಒಮ್ಮೆ ಹೆಣ್ಣಾಗು ಪ್ರಭುವೆ!’ ಕಥೆಗಳನ್ನೂ, 2007ರಲ್ಲಿ ಪ್ರಕಟವಾದ ‘ಸಫೀರಾ’ ಸಂಕಲನದಿಂದ ‘ಮೆಲುದನಿಗಳು’ ಕಥೆಯನ್ನೂ, 2012ರಲ್ಲಿ ಪ್ರಕಟವಾದ ‘ಬಡವರ ಮಗಳು ಹೆಣ್ಣಲ್ಲ’ ಕಥಾ ಸಂಕಲನದ ‘ಸ್ವರ್ಗವೆಂದರೆ’ ಕಥೆಯನ್ನೂ, 2023ರಲ್ಲಿ ಪ್ರಕಟವಾದ ‘ಹೆಣ್ಣು ಹದ್ದಿನ ಸ್ವಯಂವರ’ ಕಥಾ ಸಂಕಲನದಲ್ಲಿ ‘ಕಫನ್’ ಮತ್ತು ‘ಅರಬ್ಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ’ ಕಥೆಗಳನ್ನೂ ಆಯ್ದುಕೊಳ್ಳಲಾಗಿದೆ. ಅಂದರೆ 1990ರಲ್ಲಿ ಬಾನು ಮುಷ್ತಾಕ್ ಅವರು ಬರೆದ ಮೊದಲ ಕಥೆಯಿಂದ ಆರಂಭವಾಗಿ 2023ರ ತನಕ ಒಟ್ಟು 33 ವರ್ಷಗಳ ಕಥನದ ಪ್ರಾತಿನಿಧಿಕ ಕಥೆಗಳ ಕಟ್ಟು ‘ಹಾರ್ಟ್ ಲ್ಯಾಂಪ್’. ಹಾಗಾಗಿ ಬೂಕರ್ ಬಾನು ಅವರ ಮೂರು ದಶಕಗಳ ಕಥಾ ಪಯಣಕ್ಕೆ ಸಂದ ಗೌರವವಾಗಿದೆ. ಇದು ಅವರ ಕಥನದ ಬೆಳವಣಿಗೆಯ ದಾರಿಯನ್ನೂ, ಬದಲಾಗುತ್ತಾ ಬಂದ ಲೋಕದೃಷ್ಟಿಯನ್ನು ಜತೆಜತೆಗೆ ಸಾಂಕೇತಿಸುತ್ತಿದೆ.

‘ಶಹಿಸ್ತ ಮಹಲ್‌ನ ಕಲ್ಲು ಚಪ್ಪಡಿಗಳು’ ಕಥೆಯಲ್ಲಿ ನಿರೂಪಿಸುವ ಝೀನತ್ ಮುಸ್ಲಿಮ್ ಹೆಣ್ಣಿನ ಸ್ಥಿತಿಯನ್ನು ವಿವರಿಸಿಕೊಳ್ಳುವುದು ಹೀಗೆ, ‘ಹಾಗೆ ನೋಡಿದರೆ, ನಮ್ಮಲ್ಲಿ... ಅಂದರೆ ಮುಸ್ಲಿಮರಲ್ಲಿ ಮೇಲಿರುವ ದೇವರನ್ನು ಬಿಟ್ಟರೆ, ಹೆಣ್ಣಿಗೆ ಭೂಮಿಯ ಮೇಲೆ ಪತಿ ಎಂಬವನೇ ಭಗವಂತನಂತೆ. ...ಆತ ಕುಡುಕನಾಗಿದ್ದರೆ, ವ್ಯಭಿಚಾರಿಯಾಗಿದ್ದರೆ, ವರ ದಕ್ಷಿಣೆಗಾಗಿ ಹಗಲಿರುಳೂ ಪತ್ನಿಯನ್ನು ಹಿಂಡುವವನಾಗಿದ್ದರೆ - ಈ ಎಲ್ಲಾ ‘ರೆ’ಗಳಿದ್ದರೂ ಆತ ಪತಿಯೇ-ಯಾವ ಧರ್ಮವಾದರೂ ಸರಿಯೇ, ಅದರಲ್ಲಿ ಪತ್ನಿ ಪತಿಯ ಮೋಸ್ಟ್ ಒಬೀಡಿಯಂಟ್ ಸರ್ವೆಂಟ್; ಜೀತದಾಳು’ ಎನ್ನುತ್ತಾಳೆ. ಈ ಸ್ಥಿತಿಯನ್ನು ಬಾನು ಅವರ ಎಲ್ಲಾ ಕಥೆಗಳಲ್ಲಿಯೂ ಕಾಣಬಹುದು. ತಾಜ್‌ಮಹಲನ್ನು ಗಂಡನ ಪ್ರೀತಿಯ ಅಮರ ಕಾವ್ಯ ಎನ್ನುತ್ತಾರೆ. ಇಲ್ಲಿ ತಾಜ್‌ಮಹಲನ್ನು ‘ಶಹಿಸ್ತ ಮಹಲ್’ಗೆ ಹೋಲಿಸಿ, ಷಹಜಾನನ ಹೆಂಡತಿಯ ಬಗೆಗಿನ ಪ್ರೀತಿ ಮತ್ತು ಆಕೆ ಅನುಭವಿಸಿರಬಹುದಾದ ಸಂಕಟವನ್ನು ಶಹಿಸ್ತಳ ಮೂಲಕ ಚಿತ್ರಿಸಿದ್ದಾರೆ. ಶಹಿಸ್ತಳನ್ನು ಅಪಾರವಾಗಿ ಪ್ರೀತಿಸುವಂತೆ ನಡೆದುಕೊಳ್ಳುವ ಇಫ್ತಿಕಾರ್ ಅಹಮದ್ ಪ್ರೀತಿಯ ಆಯುಧ ಬಳಸಿ ಅವಳು ಹಡೆದು ಹಡೆದೂ ಸಾಯುವಂತೆ ಮಾಡುತ್ತಾನೆ. ಅವಳ ಸಾವಿನ ನಂತರ ನಲವತ್ತನೇ ದಿನದ ಫಾತಿಹ ಮುಗಿದ ಮಾರನೆ ದಿನ ಮತ್ತೊಂದು ಮದುವೆಯಾಗುತ್ತಾನೆ. ಹೀಗೆ ಇಡಿಯಾದ ತಾಜ್‌ಮಹಲಿನ ಅಮರ ಪ್ರೇಮದ ವ್ಯಾಖ್ಯಾನವನ್ನು ಈ ಕಥೆ ಒಡೆಯುತ್ತದೆ.

‘ಬೆಂಕಿ ಮಳೆ ಕಥೆಯಲ್ಲಿ ಮುತವಲ್ಲಿ ಉಸ್ಮಾನ್ ಸಾಹೇಬರು ತಂಗಿ ಜಮೀಲ ‘ಅಲ್ಲಾಹ್ ಮತ್ತು ಪ್ರವಾದಿಯವರ ಶರೀಯತ್ ನಿಂದ ನನಗೆ ಬಂದಿರುವ ಹಕ್ಕು. ನೀವು ದುಡಿದ ಆಸ್ತಿಯಲ್ಲಿ ಪಾಲು ಕೇಳುತ್ತಿಲ್ಲ ಎಂದು ತಂದೆಯ ಪಿತ್ರಾರ್ಜಿತ ಆಸ್ತಿಯನ್ನು ಕೇಳಿದಾಗ ಮುತವಲ್ಲಿ ಸಾಹೇಬರು ಕೆಂಡಾಮಂಡಲವಾಗುತ್ತಾರೆ. ಅಂತೆಯೇ ತನ್ನ ಹೆಂಡತಿ ಆರಿಫಾಳ ತವರು ಮನೆಯವರು ಘನತೆಯಿಂದ ಕೊಟ್ಟ ಅವಳ ಪಾಲನ್ನು ತೆಗೆದುಕೊಂಡ ಸಾಹೇಬರು ತಂಗಿಗೆ ಪಾಲು ಕೊಡಲು ಹಿಂದುಮುಂದು ನೋಡುತ್ತಾರೆ. ಇಲ್ಲಿ ಕುರ್‌ಆನ್‌ನ ಪ್ರಕಾರವೇ ಹೆಣ್ಣಿಗೆ ಆಸ್ತಿಯ ಹಕ್ಕಿದೆ ಎನ್ನುವುದನ್ನು ಪ್ರತಿಪಾದಿಸಲಾಗಿದೆ. ಅಂದರೆ ಇಸ್ಲಾಮ್ ಧರ್ಮದೊಳಗೆ ಇರುವ ಹೆಣ್ಣಿನ ಶೋಷಣೆಯನ್ನು ಹೇಳುತ್ತಲೇ, ಇದೇ ಇಸ್ಲಾಮ್ ಧರ್ಮದ ಧರ್ಮಗ್ರಂಥ ಮಹಿಳೆಯ ಬಗೆಗೆ ತಳೆಯುವ ಜೀವಪರ ಸಂಗತಿಯನ್ನೂ ಕಾಣಿಸುತ್ತಾರೆ. ಮುತವಲ್ಲಿ ಸಾಹೇಬರು ಹಿಂದೂ ಸ್ಮಶಾನದಲ್ಲಿ ಹೂತುಹಾಕಿದ ಶವವನ್ನು ಮುಸ್ಲಿಮ್ ಖರಬಸ್ತಾನದಲ್ಲಿ ಊಳಲು ಪಡುವ ಶ್ರಮ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಸ್ವತಃ ತನ್ನ ಮಗ ಅನ್ಸಾರ್ ಕಾಯಿಲೆ ಉಲ್ಬಣಿಸಿ ಸಾವಿನ ಸನಿಹ ದಾಟಿರುವುದನ್ನೂ ಗಮನಿಸುವುದಿಲ್ಲ.

‘ಹೃದಯದ ತೀರ್ಪು’ ಕಥೆಯಲ್ಲಿ ಯೂಸುಫ್ ತನ್ನ ಐವತ್ತು ವರ್ಷದ ವಿಧವೆ ತಾಯಿಗೆ ಮರು ಮದುವೆ ಮಾಡುವ ತೀರ್ಮಾನ ಮಾಡಿ ಸಿದ್ಧತೆ ಮಾಡಿಕೊಳ್ಳುವುದು, ಈ ತೀರ್ಮಾನಕ್ಕೆ ಎಲ್ಲಾ ಕಟ್ಟುಪಾಡುಗಳ ದಾಟಿ ಮರುಮದುವೆಯಾಗುವ ಗಟ್ಟಿ ನಿರ್ಧಾರಕ್ಕೆ ಬರುವ ಮೆಹಬೂಬಿ ಸ್ಥಾಪಿತವಾಗದ ಮುಸ್ಲಿಮ್- ಗಂಡು ಹೆಣ್ಣಿನ ಪ್ಯಾಟರ್ನ್ ಮುರಿಯುತ್ತಾರೆ. ‘ಎದೆಯ ಹಣತೆ’ ಕಥೆಯಲ್ಲಿ ಮುಸ್ಲಿಮ್ ಮಹಿಳೆಯರ ಎದೆಯ ಹಣತೆ ಆರಿಹೋಗಿ ಕತ್ತಲಾವರಿಸಿದ ರೂಪಕವನ್ನು ಹೇಳುತ್ತಲೇ, ಮೆಹರುನ್ ಮಗಳು ಸಲ್ಮಾಳ ಕಾರಣಕ್ಕೆ ಆತ್ಮಹತ್ಯೆಯ ನಿರ್ಧಾರದಿಂದ ಹೊರಬರುವ ಸಂಗತಿಯು ಮತ್ತೆ ‘ಎದೆಯ ಹಣತೆ’ಯನ್ನು ಹಚ್ಚುವ ವಿದ್ಯಮಾನವಾಗಿ ಬದಲಾಯಿಸಲಾಗಿದೆ.

1990ರಲ್ಲಿ ಪ್ರಕಟವಾದ ‘ಹೆಜ್ಜೆ ಮೂಡಿದ ಹಾದಿ’ ಸಂಕಲನದ ‘ಶಹಿಸ್ತ ಮಹಲ್‌ನ ಕಲ್ಲು ಚಪ್ಪಡಿಗಳು’ ಕಥೆಯ ಮುಸ್ಲಿಮ್ ಮಹಿಳೆಯ ಸ್ಥಿತಿಗೂ 2023ರಲ್ಲಿ ಪ್ರಕಟವಾದ ‘ಹೆಣ್ಣು ಹದ್ದಿನ ಸ್ವಯಂವರ’ ಕಥಾ ಸಂಕಲನದ ‘ಅರಬ್ಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ’ ಕಥೆಯ ಮಹಿಳೆಯ ಸ್ಥಿತಿಗೂ ಮುಖ್ಯವಾದ ಪಲ್ಲಟವನ್ನು ಗುರುತಿಸಬಹುದು. ಮುಸ್ಲಿಮ್ ಮಹಿಳೆ ಒಬ್ಬ ನ್ಯಾಯವಾದಿಯಾಗಿ ಮನೆಯಲ್ಲಿಯೇ ಆಧುನಿಕ ಶಿಕ್ಷಣದ ಜತೆಗೇ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಧಾರ್ಮಿಕ ಪಠ್ಯಗಳ ಕಲಿಕೆಯನ್ನು ಮಾಡಿಸಲು ಅರಬ್ಬಿ ಮೇಷ್ಟ್ರನ್ನು ನೇಮಿಸುವುದು. ಮುಸ್ಲಿಮ್ ಹೆಣ್ಣು ಬದಲಾವಣೆಯತ್ತ ಚಲಿಸುತ್ತಿದ್ದಾಳೆ ಎನ್ನುವುದನ್ನೂ, ಆದರೆ ಮುಸ್ಲಿಮ್ ಧಾರ್ಮಿಕ ಪುರುಷರು ಮತ್ತದೇ ಹೆಣ್ಣನ್ನು ಕಬಳಿಸುತ್ತಲೇ ನಡೆದಿದ್ದಾರೆ ಎನ್ನುವುದರ ಸಾಂಕೇತಿಕತೆಯಾಗಿ ಅರಬ್ಬಿ ಮೇಷ್ಟ್ರು ಹೆಣ್ಣನ್ನು ಶೋಷಿಸುವುದು ಒಂದು ರೂಪಕವಾಗಿ ಬಳಸಲಾಗಿದೆ.

ಬಾನು ಮುಷ್ತಾಕ್ ಅವರ ಕಥಾ ಜಗತ್ತಿಗೆ ಪ್ರವೇಶಿಸಿದರೆ ಮುಸ್ಲಿಮ್ ಲೋಕದ ಪಿತೃಪ್ರಧಾನ ಸಮಾಜದ ಗಂಡಿನ ಧ್ವನಿ ಢಾಳಾಗಿ ಕೇಳಿಸುತ್ತದೆ. ಕಥಾಲೋಕದ ಹೆಣ್ಣುಗಳು ನೋವನ್ನೇ ನೇಯ್ದು ಬಟ್ಟೆಯಾಗಿಸಿಕೊಂಡವರು. ಮಾತನ್ನು ಕಳೆದುಕೊಂಡು ಮೂಕವಾದವರು. ಅವರ ಕಥೆಗಳಲ್ಲಿ ಹೆಣ್ಣಿನೊಳಗೆ ಅಡಗಿದ ಪ್ರತಿರೋಧದ ಕೆಂಡದ ಕಾವನ್ನು ಓದುಗರಿಗೆ ದಾಟಿಸುತ್ತಾರೆ. ವಿಶೇಷವೆಂದರೆ, ಬಾನು ಮುಷ್ತಾಕ್ ತಮ್ಮ ಕಥಾಜಗತ್ತಿನಲ್ಲಿ ಮುಸ್ಲಿಮ್ ಸಮುದಾಯವನ್ನು ಕಪ್ಪುಬಿಳುಪಾಗಿ ತೋರುವುದಿಲ್ಲ. ಒಂದು ಧರ್ಮದ ಒಳಗೇ ಇರುವ ಬಂಧನ ಮತ್ತು ಸ್ವಾತಂತ್ರ್ಯವನ್ನು ಶೋಧಿಸುತ್ತಾರೆ. ಒಳಿತು ಮತ್ತು ಕೆಡುಕಿನ ಎರಡೂ ಎಳೆಗಳನ್ನು ಮಂಡಿಸುತ್ತಾರೆ. ಇಲ್ಲಿನ ಕಥೆಗಳಲ್ಲಿ ಮುಸ್ಲಿಮ್ ಮಹಿಳೆಯರ ಎಳೆಯ ಹಸುಗೂಸಿನಿಂದ ಮೊದಲುಗೊಂಡು ಇಳಿವಯಸ್ಸಿನ ಮಹಿಳೆಯರ ತನಕ ಹೇಗೆ ಬೇರೆ ಬೇರೆ ನೆಲೆಯಲ್ಲಿ ಶೋಷಣೆಗೆ ಒಳಗಾಗಿದ್ದಾರೆ ಎನ್ನುವುದನ್ನು ಚಿತ್ರಿಸಿದ್ದಾರೆ. ಅಂತೆಯೇ ಮುಸ್ಲಿಮ್ ಬಾಲಕರಿಂದ ಮೊದಲುಗೊಂಡು ಇಳಿ ವಯಸ್ಸಿನ ಗಂಡಸರತನಕ ಹೇಗೆ ಗಂಡಾಳ್ವಿಕೆಯು ಬೇರುಬಿಟ್ಟಿದೆ ಎನ್ನುವುದನ್ನು ಕಾಣಿಸುತ್ತಾರೆ.

ಸಾಮಾನ್ಯ ಮುಸ್ಲಿಮರು ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾದ ಈ ಸಂದರ್ಭದಲ್ಲಿ ಜಗತ್ತನ್ನು ಮುಸ್ಲಿಮ್ ಮಹಿಳಾ ಕಥಾಲೋಕಕ್ಕೆ ಪ್ರವೇಶಿಸುವಂತೆ ಮಾಡಿದ್ದುದು ಚಾರಿತ್ರಿಕವಾಗಿ ಮಹತ್ವದ ನಡೆಯಾಗಿದೆ. ‘ಬೂಕರ್’ ಮಾನ್ಯತೆ ಮೂಲಕ ಮುಸ್ಲಿಮ್ ಲೇಖಕಿಯನ್ನು ಜಗತ್ತು ಘನತೆಯಿಂದ ನೆನೆಯುವ, ಓದುವ, ಚರ್ಚಿಸುವ ಅನಿವಾರ್ಯತೆ ಸೃಷ್ಟಿಸಿರುವುದು ಈ ಪ್ರಶಸ್ತಿಯ ಹಿಂದಿರುವ ಮಾನವಿಕ ಕಾಳಜಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News