×
Ad

ರಾವೋಳ್ಳು ನಾಗಪ್ಪರ ಅಲೆಮಾರಿಗಳ ಕಡು ದುಃಖದ ಕಥನ

Update: 2025-08-26 12:00 IST

ಇದು ನಾಗಪ್ಪ ಒಬ್ಬರ ಕಥೆಯಲ್ಲ, ಅಲೆಮಾರಿಗಳ ಎಲ್ಲರ ಕಥೆಯೂ ಹೀಗೆ ಇದೆ. ನಾಗಪ್ಪ ಲೋಕವನ್ನು ಮಾತ್ರ ಅಪರಾಧಿಯನ್ನಾಗಿ ನೋಡಿಲ್ಲ. ತಮ್ಮದೇ ಸಮುದಾಯದ ಒಳಗೇ ಹೇಗೆ ಪಿತೃಪ್ರಧಾನ ಮೌಲ್ಯಗಳ ಕ್ರೌರ್ಯವಿದೆ ಎನ್ನುವುದನ್ನು ದಾಖಲಿಸುತ್ತಾರೆ. ನಿಜಕ್ಕೂ ಅಲೆಮಾರಿಗಳ ಬದುಕು ಎಷ್ಟು ಅಸ್ಥಿರವಾಗಿದೆ, ಎಷ್ಟು ಅಭದ್ರತೆಯಿಂದ ಕೂಡಿದೆ ಎನ್ನುವುದನ್ನು ಇಡೀ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗುತ್ತಾರೆ.

ಇದೀಗ ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಅಲೆಮಾರಿಗಳಿಗೆ ಆದ ಅನ್ಯಾಯಕ್ಕೆ ಕೂಗು ಎದ್ದಿದೆ. ಜಸ್ಟಿಸ್ ನಾಗಮೋಹನ್ ದಾಸ್ ಅವರ ಸಮಿತಿಯ ವರದಿಯಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಶೇ. 1ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದರು. ಆದರೆ ಸರಕಾರ ಜಾರಿ ಮಾಡುವಾಗ ಅಲೆಮಾರಿಗಳನ್ನು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳ ಜತೆ ಸೇರಿಸಿ ಒಟ್ಟು ಶೇ. 5ರಷ್ಟನ್ನು ನಿಗದಿಪಡಿಸಿದೆ. ಇದರಿಂದ ಶಾಶ್ವತವಾಗಿ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗುವ ಭಯದಲ್ಲಿ ಅಲೆಮಾರಿಗಳಿದ್ದಾರೆ. ಇದೇ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳ ಬದುಕಿನ ಬಿಕ್ಕಟ್ಟಿನ ಚರ್ಚೆಯೂ ನಡೆಯುತ್ತಿದೆ. ಇಂದು ಅಲೆಮಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ವರ್ಗದಲ್ಲಿಯೂ ಹಂಚಿ ಹೋಗಿದ್ದಾರೆ. ಹೀಗಿರುವಾಗ ಇದು ಕೇವಲ ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿಗಳ ಸಂಕಷ್ಟ ಮಾತ್ರವಲ್ಲ ಎಲ್ಲಾ ಅಲೆಮಾರಿಗಳ ದುಸ್ಥಿತಿಯೂ ಕೂಡ.

ಅಲೆಮಾರಿಗಳ ಬದುಕನ್ನು ದಾಖಲಿಸುವ ಸಂಶೋಧನೆಗಳು ನಡೆದಿವೆ, ಈಗಲೂ ನಡೆಯುತ್ತಿವೆ. 1993ರಲ್ಲಿ ಬರಗೂರು ರಾಮಚಂದ್ರ ಅವರು ಅಧ್ಯಕ್ಷರಾಗಿದ್ದಾಗ ಪ್ರಕಟವಾದ ‘ಉಪಸಂಸ್ಕೃತಿ’ ಮಾಲೆಯು ಒಂದು ಚಾರಿತ್ರಿಕ ಮಹತ್ವದ ಕೆಲಸ. ನಂತರ 2007-08ರಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಡಾ. ಕೆ.ಎಂ. ಮೇತ್ರಿ ಅವರ ಸಂಪಾದಕತ್ವದಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನಗಳು ಪ್ರಕಟವಾಗಿವೆ. 2016ರ ನಂತರ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಯು ಪರಿಶಿಷ್ಟ ಜಾತಿಯ ಕೆಲವು ಅಲೆಮಾರಿಗಳ ಬಗ್ಗೆ ಅಧ್ಯಯನ ಮಾಡಿಸಿದೆ. ಉಳಿದಂತೆ ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಕೆಲಸಗಳನ್ನು ಗಮನಿಸಬಹುದು.

ಅಲೆಮಾರಿಗಳ ಬದುಕನ್ನು ಅರ್ಥ ಮಾಡಿಕೊಳ್ಳಲು ಈ ಬಗೆಯ ಅಧ್ಯಯನಗಳು ನೆರವಾಗುತ್ತವೆ ನಿಜ, ಆದರೆ ಅಲೆಮಾರಿಗಳ ಬದುಕಿನ ನಾಡಿಮಿಡಿತವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಕನ್ನಡದ ಸಂದರ್ಭದಲ್ಲಿ ಕುಪ್ಪೆ ನಾಗರಾಜ ಅವರ ‘ಅಲೆಮಾರಿಯ ಅಂತರಂಗ’, ಎ.ಎಂ. ಮದರಿ ಅವರ ‘ಗೊಂದಲಿಗ್ಯಾ’, ರಾವೋಳ್ಳು ನಾಗಪ್ಪನ ಆತ್ಮಕಥನ ‘ಮೌನದೊಳಗಿನ ಮಾತು’ ಅಲೆಮಾರಿಗಳ ಬದುಕಿನ ನಾಡಿಮಿಡಿತ ಅರಿಯುವಲ್ಲಿ ಸಶಕ್ತವಾಗಿವೆ. ‘ಅಲೆಮಾರಿಯ ಅಂತರಂಗ’ ಮತ್ತು ‘ಗೊಂದಲಿಗ್ಯಾ’ ಸ್ವಲ್ಪ ಮಟ್ಟಿಗೆ ಚರ್ಚೆಯಾಗಿವೆ. ಆದರೆ ಡಾ.ಆರ್.ಬಿ.ಕುಮಾರ್ ಅವರು ನಿರೂಪಿಸಿದ ರಾವೋಳ್ಳು ನಾಗಪ್ಪನ ಆತ್ಮಕಥೆ ‘ಮೌನದೊಳಗಿನ ಮಾತು’ ಕೃತಿ ಅಷ್ಟಾಗಿ ಗಮನಸೆಳೆದಿಲ್ಲ. ನಾಗಪ್ಪನ ಆತ್ಮಕಥೆಯನ್ನು ಸಂಶೋಧಕರಾಗಿದ್ದ ಆರ್.ಬಿ. ಕುಮಾರ್ ಅವರು ಕೇಳಿಸಿಕೊಂಡು 2016ರಲ್ಲಿ ಪ್ರಕಟಿಸಿದ್ದರು. ಅಲೆಮಾರಿಗಳಿಗೆ ಮೀಸಲಾತಿ ಕೂಗು ಎದ್ದಿರುವ ಈ ಸಂದರ್ಭದಲ್ಲಿ ಅಲೆಮಾರಿಗಳ ಬದುಕಿನ ನೈಜತೆ ಅರಿಯಲು ನಾಗಪ್ಪನ ಬದುಕಿನ ಕಥೆಯನ್ನು ಓದಬೇಕಿದೆ.

ಈ ಕೃತಿಯನ್ನು ‘ಮನೆ ಬಾಗಿಲಿಗೆ ಹೋಗಿ ಅಮ್ಮಾ ಎಂದು ಬೇಡಿದಾಗ ಬೈದಾದರೂ ತುತ್ತನ್ನವನ್ನು ನೀಡಿ ಸಲಹಿದ ಎಲ್ಲಾ ಕೈಗಳಿಗೆ’ ಅರ್ಪಿಸಲಾಗಿದೆ. ನಾಗಪ್ಪ ಅವರು ತನ್ನ ಪರಿಚಯವನ್ನು ಆರಂಭಿಸುವುದು ಹೀಗೆ, ‘‘ನನ್ನ ಹೆಸರು ನಾಗಪ್ಪ, ಹೆಸರಿನ ಹಿಂದೆ ರಾವೋಳು ಸೇರಿಕೊಂಡಿದೆ. ರಾವೋಳು ಅಥವಾ ರಾವೋಳ್ಳು ಅನ್ನೋದು ನಮ್ಮ ಬೆಡಗಿನ ಹೆಸರು. ನಮ್ಮಪ್ಪನ ಹೆಸರು ಕಾಟೆಪ್ಪ, ಅಮ್ಮನ ಹೆಸರು ಜಂಬಮ್ಮ. ನಮ್ಮ ಅಮ್ಮ ಒಟ್ಟು ಹದಿಮೂರು ಮಕ್ಕಳ ತಾಯಿ. ಅದರಾಗೆ ಆರು ಮಕ್ಕಳು ಸಣ್ಣವಿದ್ದಾಗೆ ಸತ್ತೋದವಂತೆ. ಒಬ್ಬ ತಮ್ಮ ಮಿದುಳುಗಡ್ಡೆ ಆಗಿ ಸತ್ತುಹೋಗಿಬಿಟ್ಟ. ನಾವು ಮೂರು ಜನ ಅಣ್ಣ ತಮ್ಮಂದಿರು, ಮೂವರು ಅಕ್ಕಂದಿರು ಈಗ ಅದೀವಿ. ಮನೆದೇವುರು ಈರನಾಗಮ್ಮ. ಜಾತಿ ಸಿಂಧೋಳ್ಳು, ಸಿಂಧೋಳ್ಳು ಅನ್ನೋದು ಇತ್ತೀಚೆಗೆ ತಿಳಿದುಬಂತು. ಅದಕ್ಕೂ ಮೊದ್ಲು ದುರಗಿಮುರಗಿ, ಚಾಟಿ ಬಡಕೊಳ್ಳೋರು, ದುರಗಮ್ಮನ ಆಡಿಸುವವರು ಮುಂತಾಗಿ ಕರಿತಿದ್ರು, ನಮಗೆ ಒಂದು ನೆಲೆ ಇಲ್ಲ. ಜಾತಿಯಿಂದ ಕೀಳು ಅಂತ ಯಾರನ್ನ ಭಾವಿಸ್ತಾರೋ ಅಂಥೋರ ಮನೆಯೊಳಗೂ ಭಿಕ್ಷೆ ಬೇಡುತೀವಿ. ಊರ ಹೊರಗೆ ಯಾವುದಾದರು ಬಯಲೊಳಗೆ ಗುಡಾರ ಹೊಡಕೊಂಡಿದ್ದೀವಿ. ಭಿಕ್ಷೆ ಬೇಡೋದಾಯ್ತು ಅಂದ್ರೆ ಮುಂದಿನ ಊರಿಗೆ ಆದೇ ಕಾಯಕಕ್ಕೆ ಹೋಗ್ತಿವಿ. ನಮ್ಮ ಆಸ್ತಿ ಅಂದ್ರೆ ಬೇಡೋ ಡಬರಿ ಒಂದು, ದೇವರ ಪುಟ್ಟಿ, ಗಂಟೆ, ಚಾಟಿ, ಒಂದೆರಡು ಜೋಳಿಗೆ, ಗುಡಾರ, ಬೇಟೆ ನಾಯಿಗಳು, ಹೇರು ಎತ್ತು, ಆಕಳ, ಬಲೆ ಇಷ್ಟೆ. ನಮ್ಮೊಂದಿಗೆ ನಮ್ಮ ಕುಟುಂಬಾನೂ ಸಂಚಾರದಾಗೆ ಇರುತೈತಿ. ಇದು ನಮ್ಮ ಜಾತಿ ಜನರ ಬದುಕಿನ ಸಂಕ್ಷಿಪ್ತ ಪರಿಚಯ.’’ ಹೀಗೆ ನಾಗಪ್ಪ ಸರಳವಾಗಿ ತನ್ನ ಸಮುದಾಯದ ಚಿತ್ರವನ್ನು ಕಟ್ಟಿಕೊಡುತ್ತಾರೆ.

ಮಾತೃಪ್ರಧಾನ ಸಂಸ್ಕೃತಿಯ ಪಳೆಯುಳಿಕೆಯಂತಿರುವ ಅಲೆಮಾರಿಗಳಲ್ಲಿಯೂ ಹೆಣ್ಣು ಅಲೆಮಾರಿ ಗಂಡಸರಿಗಿಂತ ಸಂಕಷ್ಟದಲ್ಲಿದ್ದಾಳೆ. ಈ ತನಕದ ಅಧ್ಯಯನಗಳು ಗಂಡು ಪ್ರಧಾನ ಅಧ್ಯಯನಗಳೇ ಆಗಿವೆ. ಸಾಹಿತ್ಯ ಅಕಾಡಮಿಯು ಬುಡಕಟ್ಟು ಅಲೆಮಾರಿ ಮಹಿಳೆಯರ ಬಗ್ಗೆ ಗಮನ ಸೆಳೆಯುವ ಒಂದು ಪ್ರಯತ್ನ ಮಾಡಿದೆ. ಆದರೆ ಅಲೆಮಾರಿಗಳ ಒಳಗಣ ಲೋಕದಲ್ಲಿ ಹೆಣ್ಣು ಗಂಡಿನ ಕ್ರೌರ್ಯಕ್ಕೆ ಹೇಗೆ ಬಲಿಯಾಗುತ್ತಾಳೆ ಎನ್ನುವುದು ತಿಳಿಯುವುದಿಲ್ಲ. ನಾಗಪ್ಪನ ಆತ್ಮಕಥನದಲ್ಲಿ ಅದು ಕಾಣುತ್ತವೆ, ಒಮ್ಮೆ ತನ್ನ ತಾಯಿ ಬೇರೊಬ್ಬ ಗಂಡಿನ ಜತೆ ಹೋಗಿ ತಿರುಗಿ ಬಂದಾಗ ತಾಯಿಯನ್ನು ಕುಲ ಪಂಚಾಯಿತಿ ಹೇಗೆ ನಡೆಸಿಕೊಂಡಿತ್ತು ಎನ್ನುವುದನ್ನು ಹೀಗೆ ಹೇಳುತ್ತಾರೆ, ‘‘ಅಮ್ಮನ್ನ ಓಡಿಸಿಕೊಂಡುಹೋಗಿದ್ದ ವ್ಯಕ್ತಿ ಮುಖ ತಪ್ಪಿಸಿಕೊಂಡಿದ್ದ. ಅಮ್ಮನ ಎರಡೂ ಕೈಯನ್ನ ಬೆನ್ನ ಹಿಂದಕ್ಕೆ ಕಟ್ಟಿಹಾಕಿಬಿಟ್ಟು, ನಮ್ಮ ಗುಂಪಿನಾಗೆ ರಾಜಪ್ಪ, ಸಿಂಗಾರಯ್ಯ ಅನ್ನೋ ಇಬ್ರು ಯಜಮಾನರು. ಅಮ್ಮನ ವಿಚಾರಣೆ ಶುರುಮಾಡಿದ್ರು. ವಿಚಾರಣೆ ಅಂದ್ರೆ ಅಮ್ಮನಿಗೆ ಹಿಡಕೊಂಡು ಹೊಡೆಯೋದು. ಅಮ್ಮನಿಗೆ ಕೋಲು ತಗೊಂಡು ಸಿಕ್ಕಾಪಟ್ಟೆ ಹೊಡೀತಿದ್ರು, ಅಮ್ಮ ಹೊಡೆತ ತಾಳಲಾರದೆ ಅಳ್ತಾ ಇದ್ಲು, ನಾನು ಅಮ್ಮನ ಬೆನ್ನಿನ ಹಿಂದೆ ನಿಂತು ಅಮ್ಮಾ ಅಮ್ಮಾ ಅಂತ ಅಳ್ತಾ ಅದೀನಿ. ತಮ್ಮನೋರು ಸುಮ್ಮನೆ ಕಣ್ಣು ಪಿಳಿ ಪಿಳಿ ಬಿಡ್ತಾ ಕುಳಿತಾವೆ. ಅಕ್ಕಂದಿರು, ಅಣ್ಣ ದೂರಕ್ಕೆ ನಿಂತಾರೆ. ಅವ್ರಿಗೆ ಕೈಸೋಲುವಷ್ಟು ಹೊಡೆದಮೇಲೆ ಅಮ್ಮನಿಗೆ ತಪ್ಪುದಂಡ ಹಾಕಿ ಅಪ್ಪ ಅಮ್ಮನ್ನ ಒಂದುಮಾಡಿದರು. ಅಮ್ಮನಿಗೆ ಹಾಕಿದ ತಪ್ಪುದಂಡವನ್ನು ಅಪ್ಪನೇ ಕಟ್ಟಿದ. ಆಮೇಲೆ ಯಜಮಾನರಿಗೆಲ್ಲಾ ಸಾರಾಯಿ ಕುಡಿಸಿದ. ನಮ್ಮ ಜಾತಿಯೊಳಗೆ ಇದು ಮಾಮೂಲು’’ ಎಂದು ಹೇಳುತ್ತಾರೆ.

ನಾಗಪ್ಪ ನಿಧಾನಕ್ಕೆ ಸಂಘಟನೆಗಳ ಸಂಪರ್ಕಕ್ಕೆ ಬರುತ್ತಾರೆ. ಆರಂಭಕ್ಕೆ ದಲಿತ ಸಂಘರ್ಷ ಸಮಿತಿಯ ಸಂಪರ್ಕಕ್ಕೆ ಬಂದು ಅಲೆಮಾರಿಗಳನ್ನು ಸಂಘಟಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಸಂಘಟನೆಗಳು ಯಾಕೆ ಒಡೆಯುತ್ತವೆ ಎನ್ನುವುದು ನಾಗಪ್ಪನ ಪ್ರಶ್ನೆಯಾಗಿದೆ. ಹೀಗಾಗಿ ಈ ಸಂಘಟನೆಯ ಪಯಣವನ್ನು ಹೀಗೆ ದಾಖಲಿಸುತ್ತಾರೆ ‘‘ನನಗೆ ಈಗಲೂ ಅನಿಸ್ತದೆ ಓದಿ ದೊಡ್ಡ ದೊಡ್ಡ ಕೆಲಸದಾಗಿರೋ ಈ ದೊಡ್ಡವರು ಅನಿಸಿಕೊಂಡೋರು ಯಾಕೆ ಈ ರೀತಿ ಮಾಡ್ತಾರೆ ಅಂತ ಗೊತ್ತಾಗವಲ್ಲುದು. ಇವರ ಓದಿನ ಅಹಂಕಾರ ದೊಡ್ಡದಾಗಿಬಿಟ್ಟಿತೇನೋ ಅನಿಸ್ತದೆ. ಇಂಥದೇ ಒಂದು ಘಟನೆ ಹೇಳ್ತಿನಿ. ನಮ್ಮನೆಲ್ಲಾ ಹಾಕ್ಕೊಂಡು ಮೇತ್ರಿಯವರು ರಾಜ್ಯಮಟ್ಟದಲ್ಲಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ರಾಜ್ಯ ಸಂಘಟನೆ ಕಟ್ಟಿದರು. ಅವರು ಕೆಲಸದೊಳಗಿರೋದರಿಂದ ಅಧ್ಯಕ್ಷರಾಗೋಕೆ ಬರೋದಿಲ್ಲಂತೆ. ಹಂಗಾಗಿ ಭಾಸ್ಕರದಾಸ ರವರನ್ನು ರಾಜ್ಯ ಸಂಘಟನೆಯ ಅಧ್ಯಕ್ಷರನ್ನಾಗಿ ಮಾಡಿದ್ರು, ಬಾಲಗುರುಮೂರ್ತಿ ಕಾರ್ಯದರ್ಶಿಯಾಗಿದ್ರು, ಮೇತ್ರಿಯವರು ಗೌರವಾಧ್ಯಕ್ಷರಾದರು. ಇನ್ನುಳಿದಂಗೆ ನಮ್ಮನ್ನೆಲ್ಲ ನಿರ್ದೇಶಕರೋ, ಸದಸ್ಯರೋ ಮತ್ತೊಂದೋ ಮಾಡಿದ್ರು. ಬಾಲಗುರುಮೂರ್ತಿ ಮೇತ್ರಿಯವರ ಮನಸ್ತಾಪದಿಂದ ಒಕ್ಕೂಟದೊಳಗೆ ಗೊಂದಲ ಸುರುವಾದದ್ದು, ಕೊನೆಗೆ ಬಾಲಗುರುಮೂರ್ತಿ ಒಕ್ಕೂಟದಿಂದ ದೂರಾದ್ರು, ಹಿಂಗೆ ದೂರಾದ ಮೇಲೆ ಬಾಲಗುರುಮೂರ್ತಿ ಕೆಲವರನ್ನು ಸೇರಿಸ್ಕೊಂಡು ತಮ್ಮದೇ ಒಕ್ಕೂಟ ಮಾಡಿದ್ರು. ತಮ್ಮ ಒಕ್ಕೂಟಕ್ಕೆ ಬಾ ಅಂತ ನನ್ನ ಕರೆದ್ರು. ನನಗೆ ಏನೆಲ್ಲಾ ಮಾಡಿ ಮನಸ್ಸು ಒಲಿಸಿಕೊಳ್ಳೋಕೆ ನೋಡಿದ್ರು. ನಾನು ಮೊದಲ ಒಕ್ಕೂಟ ಬಿಟ್ಟು ಹೋಗೋ ಮನಸ್ಸು ಮಾಡಲಿಲ್ಲ. ಆದ್ರೆ ಈ ಒಕ್ಕೂಟಗಳನ್ನು ಇಬ್ಭಾಗ ಮಾಡಿದ್ದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಅನ್ನೋ ಸಣ್ಣ ತಿಳವಳಿಕೆ ಈ ಓದಿದೋರಿಗೆ ಇಲ್ಲವಲ್ಲ ಅಂತ ನನಗೆ ಸಂಕಟ ಆಗುತೈತೆ’’ ಎಂದು ದುಃಖದಿಂದ ದಾಖಲಿಸುತ್ತಾರೆ.

ನಾಗಪ್ಪ ತಮ್ಮ ಈ ಸ್ಥಿತಿಗೆ ತಮ್ಮ ಅನಕ್ಷರತೆಯೇ ಕಾರಣ ಎನ್ನುವುದನ್ನು ಕಂಡುಕೊಳ್ಳುತ್ತಾರೆ. ಆದರೂ ಶಾಲೆ ಕಲಿಸುವುದು ಎಷ್ಟು ಕಷ್ಟವಿತ್ತು ಎನ್ನುವುದನ್ನು ತಮ್ಮದೇ ಒಂದು ಅನುಭವವನ್ನು ದಾಖಲಿಸುತ್ತಾರೆ, ‘‘ನಮ್ಮಣ್ಣಗೆ ನಾಲ್ಕು ಜನ ಗಣಮಕ್ಳು. ನಾಕು ಜನರಾಗೆ ಈಗ ಒಬ್ಬೋನು ಆರೋ ಏಳೋ ಓದಿದ್ರೆ ಮತ್ತೊಬ್ಬೋನು ಒಂಭತ್ತೋ ಎಂಟೋ ಓದ್ತಾ ಅದಾನೆ. ಮೊದಲಿನ ಇಬ್ರು ಗಣಮಕ್ಕಳಾಗೆ ಒಬ್ಬನ್ನ ನಾನೇ ಜೋಪಾನ ಮಾಡಿ ಓದಿಸಬೇಕಂತ ಬಾಳ ಆಸೆಪಟ್ಟಿದ್ದೆ. ಆದ್ರೆ ಅಣ್ಣ ಅದಕ್ಕೆ ಅವಕಾಶ ಕೊಡಲಿಲ್ಲ. ಓದ್ರಿ ಅಂತ ಮಕ್ಕಳಿಗೆ ಪಾಟಿ ಪುಸ್ತಕ ಕೊಡಿಸಿದ್ರೆ ಅಣ್ಣ ಕುಡುದು ಬಂದು ಜಗಳಕ್ಕೆ ನಿಲ್ಲೋನು. ‘ನೀನು ಯಾಕೆ ಇವ್ರಿಗೆ ಓದಿಸ್ತಿ, ಇವರನ್ನ ಬಟ್ಟಲ ಕೊಟ್ಟು ಊರಾಗ ಬಾನಕ್ಕೆ ಕಳಿಸ್ತೀನಿ, ನೀನ್ಯಾರು ಸಾಲಿಗೆ ಕಳಿಸು ಅಂಬೋದ್ಕೆ’ ಅಂತ ಜಗಳ ಆಡೋನು. ‘ಇಲ್ಲ ನಮ್ಮನೆಯಾಗ ಒಬ್ಬನಾದ್ರೂ ಓದಿದೋನು ಇರಲಿ. ನೀನು ಆ ಹುಡುಗರಿಗೆ ಅಡ್ಡ ಆಗಬ್ಯಾಡ’ ಅಂತ ಹೇಳಿದ್ರೆ ಅಣ್ಣ ನನ್ ಮಾತು ಕೇಳಲಿಲ್ಲ. ಅವರ ಹಣೇಬರಕ್ಕೆ ನಾ ಏನು ಮಾಡೋಕಾಗತೈತೆ ಅಂತ ಸುಮ್ಮನಾಗಿಬಿಟ್ಟೆ, ಈಗ ತಮ್ಮನ ಮಗಳ ಸಾಕಿಕೊಂಡು ಆಕಿಗೆ ಶಾಲೆಗೆ ಕಳಿಸ್ತಿದೀನಿ’’ ಎನ್ನುತ್ತಾರೆ. ಅಂದರೆ ಸಮುದಾಯದ ಬದುಕಿನ ಕ್ರಮದಲ್ಲಿಯೇ ಶಾಲೆಗೆ ಕಳುಹಿಸುವ, ಶಿಕ್ಷಣಕೊಡಿಸುವ ಅರಿವು ಮೂಡಿಲ್ಲದಿರುವ ಬಗ್ಗೆ ಬಹಳ ದುಃಖದಿಂದ ನಾಗಪ್ಪ ಬರೆಯುತ್ತಾ ಹೋಗುತ್ತಾರೆ.

ಸಂಘಟನೆಯ ಒಡನಾಟದ ಅರಿವು ನಾಗಪ್ಪನನ್ನು ಸ್ವಾವಲಂಬಿಯನ್ನಾಗಿ ಮಾಡಿತು. ಈ ಕುರಿತು ತನ್ನಲ್ಲಿ ಆದ ಬದಲಾವಣೆಗಳನ್ನು ನಾಗಪ್ಪ ಹೀಗೆ ಹೇಳುತ್ತಾರೆ., ‘‘ನಾನು ಸಂಘಟನೆ ವಿಚಾರಕ್ಕೆ ತಿಳದಂತೋರ ಮಧ್ಯ ಓಡಾಡೋಕೆ ಪ್ರಾರಂಭಮಾಡಿದ ಮ್ಯಾಲೆ ನನಗೆ ಭಿಕ್ಷೆ ಬೇಡೋದು ಸರಿಯಲ್ಲ ಅನಿಸೋಕೆ ಹತ್ತಿತು. ಅದಕಾಗಿ ಭಿಕ್ಷೆ ಬೇಡೋದು ಬಿಟ್ಟೆ. ಭಿಕ್ಷೆ ಬೇಡೋದು ಬಿಟ್ಟಮ್ಯಾಲೆ ಮೀನು ಬ್ಯಾಟೆಗೆ ಹೋಗಿ ಜೀವನ ಮಾಡೋಕತ್ತಿದೆ. ಕೇವಲ ಮೀನಿನ ವ್ಯಾಪಾರದಿಂದ ಹೊಟ್ಟೆ ತುಂಬಲಾರದು ಅಂತ ಗೊತ್ತಾದಮ್ಯಾಲೆ ಒಂದು ಸಣ್ಣ ಅಂಗಡೀನ ಮನೆ ಮುಂದೆ ಮಾಡಿಕೊಂಡೆ. ಭಿಕ್ಷಾಟನೆ ಪೂರ್ತಿ ದೂರಮಾಡಿದೆ. ಅವತ್ತು ಕಂಪ್ಲಿ ಬಜಾರದಾಗೆ ಯಾರ ಅಂಗಡಿ, ಮನೆಗಳ ಮುಂದೆ ಹೋಗಿ ಭಿಕ್ಷೆ ಬೇಡಿ ಅವರ ಕೂಡ ಬೈಸಿಕೊಳ್ತಿದ್ದೋ ಅವರು ಇವತ್ತು ನನ್ನ ಪ್ರೀತಿಯಿಂದ ಮಾತಾಡಿಸ್ತಾರೆ. ಭಿಕ್ಷೆ ಅಂಬೋದು ನಮ್ ಜಾತಿಗೆ ಎಂಥಾ ಶಾಪ ಅಂಬೋದು ಈಗೀಗ ತಿಳಿಯಾಕತೈತೆ. ನಮ್ಮೋರಿಗೆಲ್ಲ ಭಿಕ್ಷೆ ಬೇಡಬ್ಯಾಡ್ರಿ ಅಂತ ಹೇಳ್ತಿನಿ. ಆದ್ರೆ ಅವು ಇನ್ನೂ ಕೇಳೋ ಸ್ಥಿತೀಲಿ ಇಲ್ಲ. ಮುಂದೆ ಅವರಿಗೆ ಬುದ್ಧಿ ಬಂದೀತೆಂಬ ಆಶಾಭಾವನೆ ನನ್ನೊಳಗೆ ಇನ್ನೂ ಉಳಿದೈತೆ. ನನಗೆ ಒಂದೊಂದ್ಸಲ ಅನಿಸ್ತತೆ. ನಾವ್ಯಾಕೆ ಇಂಥಾ ಜಾತ್ಯಾಗ ಹುಟ್ಟೀವಿ ಅಂತ, ಏನು ಮಾಡೋದು ಹುಟ್ಟಿಬಿಟ್ಟಿವಿ. ಆ ಅವಮಾನ, ಬಡತನ, ಅನಕ್ಷರತೆಗಳಿಂದ ನಾವು ಹೊರಬರಬೇಕಾಗೈತೆ. ನಮ್ ಹಳೇ ರೀತಿ ನೀತಿಗಳನ್ನು ಬಿಡಬೇಕಾಗುತೈತಿ. ಅದಕೂ ಒಂದು ಕಾಲ ಕೂಡಿಬರೋದು ದೂರಿಲ್ಲ ಅನ್ನಿಸುತೈತಿ. ನಮ್ಮೋರೆಲ್ಲ ಉದ್ಧಾರಾಗಬೇಕಂದ್ರೆ ನಾವೆಲ್ಲ ಒಂದೇಕಡೆ ಗುಂಪು ಗುಂಪಾಗಿ ಇರಬಾರದು. ಬೇರೆ ಜನಗಳ ಮಧ್ಯ ನಾವು ಬೆಳೀಬೇಕು. ಆಗ ಬೇರೆ ಜನರ ಜೊತೆಗೆ ಬೆರೆತಾದ್ರೂ ಅವರಂಗೆ ನಾವು ಆಗುತೀವೇನೋ ಅನಿಸುತೈತೆ’’ ಎನ್ನುತ್ತಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ದಲಿತರು ಹಳ್ಳಿಗಳಲ್ಲಿ ಇರುವುದಕ್ಕಿಂತ ನಗರಗಳಿಗೆ ವಲಸೆ ಬಂದು ಹೊಸ ಹೊಸ ಉದ್ಯೋಗಗಳನ್ನು ಹಿಡಿದು ಬದಲಾಗಬೇಕು ಎನ್ನುತ್ತಾರೆ. ಇದು ನಾಗಪ್ಪ ಒಬ್ಬರ ಕಥೆಯಲ್ಲ, ಅಲೆಮಾರಿಗಳ ಎಲ್ಲರ ಕಥೆಯೂ ಹೀಗೆ ಇದೆ. ನಾಗಪ್ಪ ಲೋಕವನ್ನು ಮಾತ್ರ ಅಪರಾಧಿಯನ್ನಾಗಿ ನೋಡಿಲ್ಲ. ತಮ್ಮದೇ ಸಮುದಾಯದ ಒಳಗೇ ಹೇಗೆ ಪಿತೃಪ್ರಧಾನ ಮೌಲ್ಯಗಳ ಕ್ರೌರ್ಯವಿದೆ ಎನ್ನುವುದನ್ನು ದಾಖಲಿಸುತ್ತಾರೆ. ನಿಜಕ್ಕೂ ಅಲೆಮಾರಿಗಳ ಬದುಕು ಎಷ್ಟು ಅಸ್ಥಿರವಾಗಿದೆ, ಎಷ್ಟು ಅಭದ್ರತೆಯಿಂದ ಕೂಡಿದೆ ಎನ್ನುವುದನ್ನು ಇಡೀ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗುತ್ತಾರೆ. ಇಂತಹ ಅಲೆಮಾರಿಗಳಿಗೆ ಒಳಮೀಸಲಾತಿಯ ಸೌಲಭ್ಯವಾದರೂ ಚೂರು ಉಸಿರಾಟವನ್ನು ಸರಾಗಗೊಳಿಸಬಹುದು ಎಂದುಕೊಂಡಿದ್ದಾರೆ. ಇದು ಕೇವಲ ಪರಿಶಿಷ್ಟ ಜಾತಿಗಳ ಪಟ್ಟಿಯ ಅಲೆಮಾರಿಗಳ ಗೋಳಲ್ಲ, ಬೇರೆ ಬೇರೆ ವರ್ಗಗಳಲ್ಲಿ ಹಂಚಿಹೋದ ಎಲ್ಲಾ ಅಲೆಮಾರಿಗಳ ಸ್ಥಿತಿ ಇದೇ ಆಗಿದೆ. ಹಾಗಾಗಿ ಸಮಗ್ರ ಅಲೆಮಾರಿಗಳ ಒಳಮೀಸಲಾತಿಗಾಗಿ ಧ್ವನಿ ಎತ್ತಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News