ನನ್ನೊಂದಿಗೆ ಜಗಳ ಕಾಯುವ ಲಂಕೇಶರ ‘ಕ್ಯಾತ’
ತನ್ನ ಗುಡಿಸಲಿನಿಂದ ಲೋಕವನ್ನೂ, ಲೋಕದ ಕಣ್ಣಿನಿಂದ ತನ್ನನ್ನೂ ಸ್ವವಿಮರ್ಶೆಗೆ ಒಡ್ಡಿಕೊಳ್ಳುವ ಕಾರಣಕ್ಕೆ ಕ್ಯಾತ ನಮ್ಮನ್ನು ಅಲ್ಲಾಡಿಸುತ್ತಾನೆ. ಕ್ಯಾತನ ಮಾತುಗಳು ಅನಾಥ ಪ್ರಜ್ಞೆಯನ್ನು ಮೂಡಿಸುತ್ತವೆ. ಒಮ್ಮಮ್ಮೆ ಗಂಟಲು ಕಟ್ಟಿಸುತ್ತದೆ. ಎಷ್ಟೋ ಬಾರಿ ಕಣ್ಣಂಚಲ್ಲಿ ನೀರು ತುಂಬುತ್ತದೆ. ಹಸಿವಿನ ಕ್ರೂರತೆಯನ್ನು ಕ್ಯಾತ ಚುಚ್ಚುವಂತೆ ನಾಟಿಸುತ್ತಾನೆ. ನನಗಂತೂ ಕ್ಯಾತ ಗೆಳೆಯನಾಗಿ, ಕಟು ವಿಮರ್ಶಕನಾಗಿ, ಟೀಕಾಕಾರನಾಗಿ, ಸುಳ್ಳು ವಂಚನೆ ಆತ್ಮರತಿಯ ಸಂದರ್ಭಗಳಲ್ಲೆಲ್ಲಾ ‘ಅದೇನು ಡೌಲು ಮಾಡ್ತೀಯೋ’ ಎಂದು ಗದರಿದಂತಾಗುತ್ತದೆ.
ಸಾಹಿತ್ಯದ ಓದು ನಮ್ಮೊಳಗೆ ಒಂದು ಕಾಲ್ಪನಿಕ ಲೋಕವನ್ನು ಸೃಷ್ಟಿಸಿರುತ್ತದೆ. ಅವರವರ ಜೀವನಾನುಭವ ಮತ್ತು ಲೋಕದೃಷ್ಟಿಯನ್ನು ಆಧರಿಸಿ ಪ್ರತಿಯೊಬ್ಬರ ಒಳಗೂ ರೂಪುಗೊಂಡ ಲೋಕ ಭಿನ್ನವಾಗಿರುತ್ತದೆ. ಅದೇ ಸಾಹಿತ್ಯದ ಹೆಚ್ಚುಗಾರಿಕೆ. ಹಾಗಾಗಿ ಪ್ರತಿಯೊಬ್ಬರ ಕಣ್ಣೆದುರಿನ ಲೋಕದ ಜತೆ ಈ ಲೋಕ ಚೂರು ಫರಕಿನದು. ನನ್ನೊಳಗಿನ ಸಾಹಿತ್ಯದ ಓದಿನಿಂದ ರೂಪುಗೊಂಡ ಲೋಕದಲ್ಲಿ ಗಟ್ಟಿಯಾಗಿ ಕೂತು ಕಾಡುವ ಪಾತ್ರಗಳಲ್ಲಿ ಲಂಕೇಶರ ‘ಅಕ್ಕ’ ಕಾದಂಬರಿಯ ‘ಕ್ಯಾತ’ನೂ ಒಬ್ಬ.
ಕ್ಯಾತ ಬಳ್ಳಾರಿಯ ಕಡೆಯಿಂದ ಬೆಂಗಳೂರಿಗೆ ವಲಸೆ ಬಂದ ಬಡ ಕುಟುಂಬದ ಸದಸ್ಯ. ತಂದೆಯ ಮುಖ ನೋಡುವ ಮೊದಲೇ ತಂದೆ ತೀರಿಕೊಂಡಿದ್ದ. ಅವ್ವ ಸತ್ತ ವರ್ಷ ಮಲ್ಲೇಶ್ವರದ ಹೂವಿನ ಅಂಗಡಿ ಕಿತ್ತು ಹಾಕಿದಾಗ ಹೊರಬಿದ್ದ ಅಕ್ಕ ತಮ್ಮ ಹೌಗ್ರೌಂಡ್ಸ್ ಹತ್ತಿರ ತಲೆಯೆತ್ತಿದ ಐವತ್ತು ಗುಡಿಸಲುಗಳಲ್ಲಿ ಒಂದು ಗುಡಿಸಲಲ್ಲಿ ಬದುಕತೊಡಗುತ್ತಾರೆ. ಈ ಗುಡಿಸಲು ದೇವೀರಿ ವೋಟು ಹಾಕಿ ಗೆಲ್ಲಿಸಿದ ಎಂಎಲ್‌ಎ ರಾಮಪ್ಪನಿಂದ ಸಿಕ್ಕಿದ್ದು. ಅದೂ ಸ್ವಂತದ್ದಲ್ಲ ಬಾಡಿಗೆಯದು. ಮೊದ ಮೊದಲು ದೇವೀರಿ ಇಟ್ಟಿಗೆ ಭಟ್ಟಿಗಳಲ್ಲಿ ಇಟ್ಟಿಗೆ ಹೊರುವ ಕೆಲಸಕ್ಕೆ ಹೋಗುವವಳು. ತನ್ನ ತಮ್ಮ ಕ್ಯಾತ ಓದಿ ದೊಡ್ಡವನಾಗಬೇಕೆಂದು ಕನಸು ಕಟ್ಟಿದವಳು. ಹುಡುಗಿ ಹೆಣ್ಣಾದಂತೆ ನಿಧಾನಕ್ಕೆ ತನ್ನ ಸುತ್ತಣ ಗಂಡುಗಳ ಕಾಮದ ಕಣ್ಣಿನ ದಾಳಿಗೆ ಸಿಕ್ಕು ಮೈಮಾರುವ ಹಂತಕ್ಕೆ ಬರುತ್ತಾಳೆ. ಭ್ರಮೆಗಳಲ್ಲಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾಳೆ. ತಮ್ಮನಾಗಿ ಕ್ಯಾತ ಒಳಗೊಳಗೆ ಕುದಿಯುವ, ವ್ಯವಸ್ಥೆಯ ಕ್ರೌರ್ಯಕ್ಕೆ ಅಕ್ಕ ಬಲಿಯಾಗುವುದನ್ನು ಸಹಿಸದೆ ಚಡಪಡಿಸುವ ಜೀವ.
ತಾನು ಹೇಳುವ ತನ್ನದೇ ಕತೆಯಲ್ಲಿ ಕಲ್ಪನೆ ಸೇರಿಸಿದರೆ ಸುಳ್ಳುಗಳು ನುಸುಳಿ ಬಿಡುತ್ತವೆ ಎನ್ನುವ ಕ್ಯಾತನ ಪಾತ್ರ ಅನೇಕರ ಸಂಗತಿ ಹೇಳುತ್ತಾ ಹೇಳುತ್ತಾ ರೂಪುಗೊಳ್ಳುತ್ತದೆ. ಅಂದರೆ ಹಾಗೆ ಹೇಳುವಾಗಲೇ ನಮ್ಮೊಂದಿಗೆ ಆತ ಮಾತಿಗಿಳಿಯುತ್ತಾನೆ. ಅಕ್ಕ ದೇವೀರಿ ಬಗೆಗೆ ಕ್ಯಾತನಿಗೆ ಅತೀವ ಪ್ರೀತಿ ಅಕ್ಕರೆ. ಆದರೆ ಆಕೆಯ ನಡೆಗಳ ಬಗೆಗೆ ಅಷ್ಟೇ ಗುಮಾನಿ ಮತ್ತು ಸಿಟ್ಟು. ಕ್ಯಾತ ಸ್ವತಃ ತನ್ನ ಬದುಕಿನ ಕತೆಯನ್ನು ನೆನಪಿಸಿಕೊಳ್ಳುತ್ತಾ, ನಾವು ಕಾಣದ ಅನೇಕ ಸೂಕ್ಷ್ಮಗಳನ್ನು ಪರಿಚಯಿಸುತ್ತಾ ಹೋಗುತ್ತಾನೆ. ತಾನು ಪರಿಚಯಿಸುವ ಸಮಾಜದ ಒಳಗೇ ಒಂದು ಪಾತ್ರವಾಗಿ ಎದುರಾಗಿ ಅಚ್ಚರಿ ಮೂಡಿಸುತ್ತಾನೆ. ಆತ ತನ್ನ ಮನದೊಳಗೆ ನಡೆಯುವ ತಾಕಲಾಟಗಳನ್ನು ಗುಟ್ಟಾಗಿಯೆಂಬಂತೆ ಓದುಗರಿಗೆ ಹೇಳುತ್ತಲೇ ಈ ಸಂಗತಿಗಳನ್ನು ಪಿಸುಮಾತಿನ ಸ್ವಗತದಂತೆಯೂ, ಮನಸ್ಸಿನೊಳಗೆ ಘಟಿಸುವ ಬಂಡಾಯದಂತೆಯೂ ನಿರೂಪಿಸುತ್ತಾನೆ.
ತನ್ನ ಕತೆ ಬರೆಯಲು ಶುರುಮಾಡುವ ಮುನ್ನ ದೊಡ್ಡ ದೊಡ್ಡ ಸಾಹಿತಿಗಳಾದ ವೆಂಕಟ್ರಾ, ಉಸಾ, ನರಸಿಂಹಯ್ಯ, ನೀಳಾದೇವಿಯಂತವರ ರೆಫರೆನ್ಸ್ ಕೊಡುತ್ತಾ ‘‘ನಾನು ಯಾವ ಸಾಹಿತಿಯೂ ಅಲ್ಲ ಸರ್’’ ಎನ್ನುತ್ತಾ ಸಾಹಿತ್ಯದ ರಚನೆಕಾರರನ್ನೂ ವ್ಯಂಗ್ಯ ಮಾಡುತ್ತಾನೆ. ಕೊನೆಗೆ ಮುಗಿಸುವಾಗ ‘‘ನನಗೆ ಅಂದ್ರೆ ಈ ನಿಮ್ಮ ಕ್ಯಾತನಿಗೆ, ಇಷ್ಟೇ ಬರೆಯೋಕಾಗ್ತಿರೋದು. ತಪ್ಪಾಗಿದ್ರೆ ಕ್ಷಮಿಸಿ ಸಾರ್..’’ಎಂದು ನಮ್ಮೊಳಗೆ ಗಟ್ಟಿಯಾಗಿ ನೆಲೆಯೂರುತ್ತಾನೆ. ತಾನೇ ತನ್ನ ಬಗ್ಗೆ ‘‘ನಾನು ಸರಿ ಇಲ್ಲ ಸರ್. ಬೀದಿ ಬದೀಲಿ ಸೆಕೆಂಡ್ ಹ್ಯಾಂಡ್ ಅಂಗಡೀಲಿ ಪುಸ್ತಕಗಳ ಓದಿ ಯೋಚನೆ ಮಾಡಿ ಬೆಳೆದವನು ನಾನು’’ ಎಂದು ತನ್ನ ಗುರುತನ್ನು ಹೇಳಿಕೊಳ್ಳುತ್ತಾನೆ. ‘‘ನಾನು ತೀರಾ ಗುಜರಿ ನನ್ಮಗ ಸರ್’’ ಎಂದು ನಮ್ಮ ಕಣ್ಮುಂದೆ ಒಬ್ಬ ಕೊಳಕ, ಕೆದರಿದ ಕೂದಲಿನ ಅಷ್ಟೇನು ಶಿಸ್ತಿಲ್ಲದ ಒಬ್ಬ ಹುಡುಗನಾಗಿ ಕಾಣುತ್ತಾನೆ. ಬಹುಶಃ ‘ಅಕ್ಕ’ ಓದಿದ ಎಲ್ಲರ ಒಳಗೂ ಕ್ಯಾತ ಹೀಗೆಯೇ ಬೇರುಬಿಟ್ಟಿರಲಿಕ್ಕೆ ಸಾಧ್ಯವಿದೆ.
ಅನಾಥಶ್ರಮದ ಗುಮಾಸ್ತ, ತನ್ನ ಬಾಲ್ಯದ ಲೋಕವನ್ನು ತೋರುತ್ತಾನೆ. ಆಗ ಆತ ನಲುವತ್ತು ದಾಟದ, ಸಾದಾ ಅಂಗಿತೊಟ್ಟ, ಕೋಲು ಮುಖದ, ಕಂದು ಬಣ್ಣದ, ಕೈ ಕಾಲ ಮೇಲೆ ಒಂದಷ್ಟು ಗಾಯದ ಗುರುತಿರುವ ಸಾದಾ ಸೀದ ಮನುಷ್ಯನ ಹಾಗೆ ಕಾಣುತ್ತಾನೆ. ಇಂತಹ ವ್ಯಕ್ತಿ ಒಂದು ಕುರ್ಚಿ ಮೇಲೆ ಕೂತು ತನ್ನದೇ ಕತೆಯನ್ನು ಬರೆಯುತ್ತಿದ್ದಾನೆ. ಇಡಿಯಾಗಿ ಅಕ್ಕ ಕಾದಂಬರಿ ಓದಿದ ಮೇಲೆ ಈ ವ್ಯಕ್ತಿ ನಮ್ಮ ಮನದೊಳಗೆ ಸದಾ ಪಾದರಸದಂತೆ ಚಟುವಟಿಕೆಯಲ್ಲಿರುವ, ಮಾಸಲು ಅಂಗಿತೊಟ್ಟ, ಚೂರು ಪಾರು ಹರಿದ ಚಡ್ಡಿ ಹಾಕಿ ಕೊಂಡು, ಸದಾ ಓಡುತ್ತಾ ತಾನು ಒಡನಾಡುವ ಎಲ್ಲರ ಒಳಗೊಂದು ಹೊರಗೊಂದು ವ್ಯಕ್ತಿತ್ವವನ್ನು ಬಯಲು ಮಾಡುತ್ತಾ ಸಮಾಜದ ಒಬ್ಬ ನಿಷ್ಠುರ ಕ್ರಿಟಿಕ್ ಆಗಿ ಕಾಣುತ್ತಾನೆ. ಓದುತ್ತಾ ಹೋದಂತೆ ನಮ್ಮೊಳಗಿನ ಡೋಂಗಿತನವನ್ನು ಪ್ರಶ್ನೆ ಮಾಡಲು ಶುರು ಮಾಡುತ್ತಾನೆ.
ಸದಾ ಚಡಪಡಿಕೆಯಲ್ಲಿರುವ ದೇವೀರಿಯನ್ನು ಕ್ಯಾತ ತನ್ನ ವಿವರಗಳಲ್ಲಿ ಕಟ್ಟುತ್ತಾ ಹೋಗುತ್ತಾನೆ. ಸದಾ ಬೈಯುವ ಜಗಳಗಂಟಿ. ಕ್ಯಾತ ಮಲಗಿದಾಗ ‘‘ಎದ್ದು ಓದಿಕಳಲೇ ಬೋಸೂಡಿ ಮಗನೇ’’ ಎಂದು ಬೈಯುವುದು ಕ್ಯಾತ ಓದಿ ದೊಡ್ಡ ಮನುಷ್ಯ ಆಗಲಿ, ನಮ್ಮ ಕಷ್ಟ ನೀಗಲಿ ಎನ್ನುವ ಕಕ್ಕುಲಾತಿಯಿಂದ. ಆದರೆ ಕ್ಯಾತನ ತಲೆಗೆ ವಿದ್ಯೆ ಹತ್ತದೆ ಬಯಲೇ ಅವನಿಗೆ ಇಸ್ಕೂಲು. ಕ್ಯಾತ ಯಾವುದೇ ರಿಯಾಯಿತಿಗಳಿಲ್ಲದೆ ತನ್ನ ಮನುಷ್ಯ ಸಹಜ ನಡೆಗಳನ್ನು ಹೇಳುತ್ತಾ ಹೋಗುತ್ತಾನೆ. ಒಮ್ಮೆ ದೇವೀರಿ ಹರಕಲು ಕುಪ್ಪಸ ತೆಗೆದು ಒಳ್ಳೆಯ ಜಾಕೀಟಿಗಾಗಿ ಹುಡುಕುತ್ತಿರುತ್ತಾಳೆ. ಅಕ್ಕನ ಕಡೆ ನೋಡಬಾರದೆಂದು ಎಷ್ಟು ಬೈದುಕೊಂಡರೂ ‘ನೋಡಿದರೇನಾಯಿತು’ ಎಂದು ಕಣ್ಣಂಚಿನಲ್ಲಿ ನೋಡಿದ ವಿವರ ಬರುತ್ತದೆ. ಇದರಿಂದ ದೇವೀರಿ ಸಿಟ್ಟಾಗಿ ಬೈಯುತ್ತಾಳೆ.
ಕ್ಯಾತ ಗಂಡು ಪ್ರಧಾನ ಸಮಾಜದ ಪ್ರತಿಬಿಂಬವಾಗಿ ತೋರುವುದು ಸಹಜವಾಗಿದೆ. ಕ್ಯಾತನ ನಿಜವಾದ ಹೆಸರು ಕೃಷ್ಣ, ಆದರೆ ಕ್ಯಾತನೇ ಹೇಳುವಂತೆ ‘‘ಹಟ್ಟಿಯ ಹಲ್ಲಂಡೆ ಮಕ್ಕಳು, ಆ ನನ್ನ ಅಕ್ಕ ಚಿತ್ರಾಂಗಿ ದೇವೀರಿ, ನಮ್ಮ ಹಟ್ಟಿಯ ಪದ್ದಿ ಲಲಿತ ಮುನಿರಾಜು, ಆ ಕೊಳಕು ನನ್ಮಕ್ಕಳು ಖಡವಾ ನಾಗ್ರ ಎಲ್ಲರೂ ಸೇರಿ ನನ್ನನ್ನ ಕ್ಯಾತನ್ನ ಮಾಡಿದಾರೆ. ಕೃಷ್ಣ ಅಂದಾಗಲೆಲ್ಲಾ ಒಂಥರಾ ಮಜಾ ಬರುತ್ತೆ’’ ಎನ್ನುತ್ತಾನೆ. ಅಂದರೆ ಬಡಬಗ್ಗರ ವಸತಿ ಪ್ರದೇಶಗಳಲ್ಲಿ ಅಥವಾ ಸ್ಲಂಗಳಲ್ಲಿ ಇಟ್ಟ ಹೆಸರೊಂದಾದರೆ ಆಯಾ ಪ್ರದೇಶದ ಜಾಯಮಾನಕ್ಕೆ ಒಗ್ಗುವ ಹಾಗೆ ಅಲ್ಲಿಯದೇ ಲೋಕಲ್ ಹೆಸರೊಂದನ್ನು ಆ ವಾತಾವರಣವೇ ನಾಮಕರಣ ಮಾಡಿರುತ್ತದೆ. ಇದು ಕೃಷ್ಣ ಕ್ಯಾತನಾದದ್ದರ ಹಿಂದಿನ ಕತೆ.
ಕ್ಯಾತನೂ ಸದಾ ಚಡಪಡಿಸುವ ಎಲ್ಲವನ್ನೂ ಅನುಮಾನದಿಂದ ನೋಡುವ, ಎಲ್ಲರ ಬೂಸೀತನವನ್ನು ಬಯಲುಮಾಡುವ ಹುಡುಗನಾಗಿ ಕಾಣುತ್ತಾನೆ. ಎಲ್ಲರೊಳಗೂ ಬಾಲ್ಯದಲ್ಲಿ ಕ್ಯಾತ ಎಷ್ಟೋ ಸಲ ಬಂದು ಹೋಗಿದ್ದಾನೆ ಅನ್ನಿಸಿಬಿಡುತ್ತದೆ. ಕ್ಯಾತನ ಎರಡು ಬಗೆಯ ವ್ಯಕ್ತಿತ್ವಗಳು ಕಾಣಿಸಿಕೊಳ್ಳುತ್ತವೆ. ಗುಡಿಸಲ ಒಳಗೆ ತನ್ನ ಅಕ್ಕ ದೇವೀರಿ ಜತೆ ಇರುವ ಕ್ಯಾತ, ಅಂತೆಯೇ ತಾನು ವಾಸವಾಗಿರುವ ಐವತ್ತು ಗುಡಿಸಲುಗಳ ಇತರ ಮನೆಗಳವರ ಜತೆಗಿನ ಒಡನಾಟ. ಹೀಗಾಗಿ ಗುಡಿಸಲ ಒಳಗಿನ ಕ್ಯಾತ ಕಾಣುವಂತೆ ಗುಡಿಸಲ ಹೊರಗಿನ ಕ್ಯಾತ ನಮ್ಮೆದುರು ಕಾಣುತ್ತಾರೆ. ಗುಡಿಸಲ ಒಳಗೆ ಒಬ್ಬ ಗಂಡಸಾಗಿ ಅಕ್ಕ ದೇವೀರಿಯ ನಡೆಗಳ ಬಗೆಗೆ ಸಿಟ್ಟಾಗುತ್ತಾನೆ. ಅಂತೆಯೇ ಮುಗ್ಧನಂತೆಯೂ ಕಾಣುತ್ತಾನೆ. ಮನೆ ಹೊರಗಿನ ಕ್ಯಾತ ಸಮಾಜದ ಎಲ್ಲ ಬಗೆಯ ಹಿಪಾಕ್ರಸಿಯನ್ನು ಬಯಲು ಮಾಡುವ ಒಬ್ಬ ಟೀಕಾಕಾರನಂತೆ ಕಾಣುತ್ತಾನೆ. ಸಿನೆಮಾ ಕನಸಿನ ಬಣ್ಣದ ಲೋಕದ ಬೆನ್ನೇರಿ ಹೊರಟ ಪದ್ದಿಯ ಕನಸಿನ ಲೋಕ ಮತ್ತು ಕಟು ವಾಸ್ತವವನ್ನು ಕ್ಯಾತ ಕಡು ಕೋಪದಿಂದಲೂ ಅಸಹಾಯಕತೆಯಿಂದಲೂ ದಾಖಲಿಸುತ್ತಾನೆ. ಗೋಲಿ ಆಡಲು ಕರೆಯುವ ತನ್ನ ಗೆಳೆಯ ಸುಧೀರ ತನ್ನ ತಾಯಿಯ ಕೈಹಿಡಿದು ನಡೆಯುವಾಗ ‘‘ನನ್ನವ್ವ ಇದ್ದಿದ್ರೆ ನನ್ನನ್ನೂ ಹೀಗೆ ಹಿಡಕೊಳ್ತಿದ್ಲು’’ ಎಂದು ಮರುಗುತ್ತಾನೆ.
ಕ್ಯಾತ ಕನ್ನಡ ಚಳವಳಿಯ ಹುಸಿತನವನ್ನೂ ಬಯಲು ಮಾಡುತ್ತಾನೆ. ಒಮ್ಮೆ ಕನ್ನಡ ರಾಜ್ಯೋತ್ಸವಕ್ಕೆ ಹಣ ಎತ್ತುವ ಗುಂಪಿನ ಜತೆ ಸೇರುತ್ತಾನೆ. ದೇವೀರಿ ಖರ್ಚಿಗೆಂದು ಸಲೀಸಾಗಿ ಕೊಟ್ಟ ಐವತ್ತು ರೂಪಾಯಿ ಅವಳು ದುಡಿದು ಗಳಿಸಿದ್ದೋ ಅಥವ ಅವಳಿಗಾಗಿ ಯಾರೋ ಗಂಡಸರು ಕೊಟ್ಟದ್ದಾ ಎಂದು ಯೋಚಿಸುವಾಗಲೇ ಆ ಹಣವನ್ನು ಖರ್ಚು ಮಾಡುವ ಮನಸ್ಸು ಬಾರದೆ, ರಾಜ್ಯೋತ್ಸವದ ಹುಂಡಿಗೆ ಹಾಕ್ತಾನೆ. ಇದ್ದಕ್ಕಿದ್ದಂತೆ ಕ್ಯಾತ ಕನ್ನಡದ ಖ್ಯಾತ ಹೋರಾಟಗಾರನಾಗಿಬಿಡ್ತಾನೆ. ಬಳ್ಳಾರಿ ಮೂಲದ ಕ್ಯಾತನನ್ನು ಚಳವಳಿಗಾರರು ಕೊಂಗರ (ತಮಿಳರ) ಹುಡುಗನೇ ಐವತ್ತು ರೂಪಾಯಿ ಕೊಟ್ಟಿರುವಾಗ ನಿಮಗೇನಾಗಿದೆ ಎಂದು ಅಂಗಡಿಗಳವರನ್ನು ಕೇಳತೊಡಗುತ್ತಾರೆ. ಕೊನೆಗೆ ಈ ಕ್ಯಾತನನ್ನೇ ಹರಾಜಿಗಿಡುವ ಕನ್ನಡಾಭಿಮಾನದ ವೈರುಧ್ಯವನ್ನು ತಣ್ಣಗೆ ದಾಖಲಿಸುತ್ತಾನೆ.
ಕ್ಯಾತ ತನ್ನ ಅಕ್ಕ ದೇವೀರಿ ಮತ್ತು ಪದ್ದಿಯ ಬಗ್ಗೆ ಹೇಳುತ್ತಾ ದಿಕ್ಕು ದೆಸೆ ಇಲ್ಲದ ಸ್ಲಂನ ಅನಾಥ ಹೆಣ್ಣುಗಳನ್ನು ಗಂಡು ಲೋಕ ಹೇಗೆ ನೋಡುತ್ತೆ ಎನ್ನುವ ಚಿತ್ರವನ್ನು ಕೊಡುತ್ತಾನೆ. ಎಂಎಲ್‌ಎ ರಾಮಣ್ಣನ ಬಗ್ಗೆ ಹೇಳುತ್ತಾ ಸಜ್ಜನ ರಾಜಕಾರಣಿಯ ಬಿಕ್ಕಟ್ಟನ್ನು ಮುಂದಿಡುತ್ತಾನೆ. ಇಡಿಯಾಗಿ ಕ್ಯಾತನ ನಿರೂಪಣೆಯಲ್ಲಿ ನಮ್ಮ ಕಣ್ಣೆದುರು ಸ್ಲಂ ಒಂದು ಪ್ರತ್ಯಕ್ಷವಾಗುತ್ತದೆ. ಕೊಳಚೆ ಪ್ರದೇಶದ ಘಾಟು ಮೂಗಿಗೆ ಅಡರುತ್ತದೆ. ಕ್ಯಾತ ಒಮ್ಮೆ ಅನಾಥ ಹುಡುಗನಾಗಿ, ನಿಷ್ಠುರಿಯಾಗಿ, ಲೋಕದ ಡೊಂಕ ತಿದ್ದುವವನಾಗಿ, ಒಮ್ಮೊಮ್ಮೆ ಮನುಷ್ಯನ ಕ್ಷುಲ್ಲಕ ಗುಣಗಳೆಲ್ಲಾ ತುಂಬಿಕೊಂಡವನಾಗಿ ನಾನಾ ಬಗೆಯಲ್ಲಿ ಕಾಣತೊಡಗುತ್ತಾನೆ.
ಲಂಕೇಶರು ಈ ಕಾದಂಬರಿಯ ಬಗ್ಗೆ ಇದನ್ನೊಂದು ರಾಜಕೀಯ ಕಾದಂಬರಿ ಎನ್ನುತ್ತಾ ‘ದಾರಿಹೋಕ ನೋಡುವ, ಚಿಂತಿಸುವ, ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ದರೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇಸಿಗುತ್ತಾನೆ’ ಎನ್ನುತ್ತಾರೆ. ನಿಜಕ್ಕೂ ಇದು ಸಾಂಸ್ಕೃತಿಕ ರಾಜಕಾರಣದ ಪಠ್ಯ. ಅಂತೆಯೇ ಲಂಕೇಶರು ಸೃಷ್ಟಿಸಿದ ಮರೆಯಬಾರದ ಪಾತ್ರಗಳಲ್ಲಿ ಕ್ಯಾತನೂ ಒಬ್ಬ. ಈತನೊಬ್ಬ ಪಾತ್ರವೋ..ಅಥವಾ ತನ್ನನ್ನು ತಾನೇ ನಿರೂಪಿಸಿಕೊಳ್ಳುವ ಕಥನಕಾರನೋ ಒಂದರೊಳಗೊಂದು ಬೆರೆತಂತಿದೆ. ತನ್ನ ಗುಡಿಸಲಿನಿಂದ ಲೋಕವನ್ನೂ, ಲೋಕದ ಕಣ್ಣಿನಿಂದ ತನ್ನನ್ನೂ ಸ್ವವಿಮರ್ಶೆಗೆ ಒಡ್ಡಿಕೊಳ್ಳುವ ಕಾರಣಕ್ಕೆ ಕ್ಯಾತ ನಮ್ಮನ್ನು ಅಲ್ಲಾಡಿಸುತ್ತಾನೆ. ಕ್ಯಾತನ ಮಾತುಗಳು ಅನಾಥ ಪ್ರಜ್ಞೆಯನ್ನು ಮೂಡಿಸುತ್ತವೆ. ಒಮ್ಮಮ್ಮೆ ಗಂಟಲು ಕಟ್ಟಿಸುತ್ತದೆ. ಎಷ್ಟೋ ಬಾರಿ ಕಣ್ಣಂಚಲ್ಲಿ ನೀರು ತುಂಬುತ್ತದೆ. ಹಸಿವಿನ ಕ್ರೂರತೆಯನ್ನು ಕ್ಯಾತ ಚುಚ್ಚುವಂತೆ ನಾಟಿಸುತ್ತಾನೆ. ನನಗಂತೂ ಕ್ಯಾತ ಗೆಳೆಯನಾಗಿ, ಕಟು ವಿಮರ್ಶಕನಾಗಿ, ಟೀಕಾಕಾರನಾಗಿ, ಸುಳ್ಳು ವಂಚನೆ ಆತ್ಮರತಿಯ ಸಂದರ್ಭಗಳಲ್ಲೆಲ್ಲಾ ‘ಅದೇನು ಡೌಲು ಮಾಡ್ತೀಯೋ’ ಎಂದು ಗದರಿದಂತಾಗುತ್ತದೆ.