ಕಲಬುರಗಿ| ಲಾಠಿಯೊಂದಿಗೆ ಆರೆಸ್ಸೆಸ್ ಮೆರವಣಿಗೆಗೆ ಅನುಮತಿ ನೀಡದಿರಲು ಸೌಹಾರ್ದ ಕರ್ನಾಟಕ ಸಂಘಟನೆ ಆಗ್ರಹ
ಆರೆಸ್ಸೆಸ್ ಎನ್ನುವುದು 'ರಾಷ್ಟ್ರೀಯ ಸರ್ವನಾಶ ಸಂಘ': ಕೆ.ನೀಲಾ
ಕಲಬುರಗಿ: ನ.2 ರಂದು ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನದ ಮೆರವಣಿಗೆಗೆ ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಲಾಠಿಯೊಂದಿಗೆ ಪಥಸಂಚಲನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಸಾಮಾಜಿಕ ಹೋರಾಟಗಾರರು, ಪ್ರಗತಿಪರರನ್ನು ಒಳಗೊಂಡ 'ಸೌಹಾರ್ದ ಕರ್ನಾಟಕ' ಸಂಘಟನೆಯ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಅವರು, ಲಾಠಿ ಆಯುಧದ ಸಂಕೇತವಾಗಿರುವುದರಿಂದ ಯಾವುದೇ ಕಾರಣಕ್ಕೂ ಲಾಠಿಯೊಂದಿಗೆ ಪಥಸಂಚಲನಕ್ಕೆ ಅವಕಾಶ ಕೊಡಬಾರದು, ಈ ಹಿಂದೆ ಲಾಠಿಯೊಂದಿಗೆ ಪಥಸಂಚಲನ ನಡೆಸಿದ್ದರಿಂದ ಹಲವು ಕಡೆಗಳಲ್ಲಿ ಕೋಮು ಗಲಭೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಲಾಠಿಯೊಂದಿಗೆ ಮೆರವಣಿಗೆಗೆ ಅವಕಾಶ ಕೊಡಬಾರದು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಕರ್ನಾಟಕದಾದ್ಯಂತ ಜನರು ಚಿತ್ತಾಪುರದಲ್ಲಿ ಸೇರುವಂತೆ ಒತ್ತಾಯಿಸುವ ಕರೆಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ, ಒಂದು ಲಕ್ಷ ಜನರು ಸೇರಬಹುದು ಎಂಬ ಹೇಳಿಕೆಗಳಿವೆ. ಇಂತಹ ಪ್ರಚೋದನಕಾರಿ ಸಾಲುಗಳನ್ನು ಗಮನಿಸಿದರೆ ಚಿತ್ತಾಪುರದಲ್ಲಿ ಅನಾಹುತ ಸಂಭವಿಸಬಹುದು ಎಂಬ ಭೀತಿ ಎದುರಾಗಿದೆ. ಬಡಿಗೆ ಹಿಡಿದುಕೊಂಡು ಜನರನ್ನು ಭಯವನ್ನುಂಟು ಮಾಡುವ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಹೋರಾಟಗಾರ್ತಿ ಕೆ.ನೀಲಾ, "ಆರೆಸ್ಸೆಸ್ ಕಳೆದ ನೂರು ವರ್ಷಗಳಲ್ಲಿ ಈ ದೇಶದ ರಕ್ಷಣೆಯಲ್ಲಿ ಪಾಲ್ಗೊಂಡಿಲ್ಲ, ಬದಲಾಗಿ ದ್ವೇಷವನ್ನು ಹುಟ್ಟು ಹಾಕಿದೆ, ಆರೆಸ್ಸೆಸ್ ಅನ್ನುವುದು ರಾಷ್ಟ್ರೀಯ ಸರ್ವನಾಶ ಸಂಘ ಇದೆ, ಆರೆಸ್ಸೆಸ್ ನವರು ಈವರೆಗೆ ಭಾರತದ ಧ್ವಜವನ್ನು ಹಿಡಿದಿಲ್ಲ, ಪಥಸಂಚಲನದಲ್ಲಿ ಲಾಠಿ ಹಿಡಿಯುತ್ತಾರೆ, ಇವರ ಕೈಯಲ್ಲಿ ನೀಲಿ ಚಕ್ರವಿರುವ ತಿರಂಗಾ ಹಿಡಿಯಲು ಯಾಕೆ ಆಗುವುದಿಲ್ಲ" ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೊ. ಆರ್. ಕೆ ಹುಡಗಿ, ಕೆ.ನೀಲಾ, ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಆರ್.ಜಿ ಶಟಕಾರ, ಪ್ರಭುಲಿಂಗ ಮಹಾಗಾಂವಕರ್, ಸುರೇಶ ಹಾದಿಮನಿ, ಮಾರುತಿ ಗೋಖಲೆ, ಪದ್ಮಿನಿ ಕಿರಣಗಿ, ಟಿ.ಧನರಾಜ್, ಶ್ರೀಶೈಲ್, ವಿಶ್ವನಾಥ ಮಂಗಲಗಿ, ಮಲ್ಲಪ್ಪ ಹೊಸಮನಿ, ಎ.ಬಿ ಹೊಸಮನಿ ಮಲ್ಲಿಕಾರ್ಜುನ ವಡ್ಡನಕೇರಿ, ಅಶೋಕ್ ಗೂಳಿ, ಹಣಮಂತ ಗುಡ್ಡಾ, ಸಾಜಿದ್ ದಿಗ್ಗಾಂವ, ಲವಿತ್ರ ವಸ್ತ್ರದ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.