1,051 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ : ಜಿಲ್ಲೆಯ ಪ್ರತಿ ಹಳ್ಳಿಗೂ ಹಾಗೂ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಗ್ಯಾರಂಟಿ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ . ಜಿಲ್ಲೆಯಲ್ಲಿ ವಿವಿಧ ತಾಲೂಕುಗಳಲ್ಲಿ 1,051.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಅಫಜಲಪುರ ತಾಲ್ಲೂಕಿನಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಹಸರಗುಂಡಗಿ ಹಾಗೂ ಇತರೆ 6 ಗ್ರಾಮಗಳು ಮತ್ತು ಮಾರ್ಗ ಮಧ್ಯದ 5 ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸೇಡಂ ತಾಲ್ಲೂಕಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕಚೂರು ಗ್ರಾಮ ಹಾಗೂ ಇತರೆ 9 ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಚಿಂಚೋಳಿ ತಾಲ್ಲೂಕಿನಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಸಲಗರ ಬಸಂತಪುರ ಹಾಗೂ ಇತರೆ 9 ಗ್ರಾಮಗಳಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
260 ಕೋಟಿ ರೂ. ವೆಚ್ಚದಲ್ಲಿ ಕಾಳಗಿ, ಚಿತ್ತಾಪುರ, ಚಿಂಚೋಳಿ ಹಾಗೂ ಕಲಬುರಗಿ ತಾಲ್ಲೂಕುಗಳಲ್ಲಿ ಡಿಬಿಒಟಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರಡಿ ಬೆಡಸೂರು ಹಾಗೂ ಇತರೆ 95 ಜನವಸತಿ ಪ್ರದೇಶಗಳು ಮತ್ತು ಕಾಳಗಿ ಪಟ್ಟಣದಲ್ಲಿ ಕಾಮಗಾರಿಗಳು ಸಾಗುತ್ತಿವೆ. 185 ಕೋಟಿ ರೂ. ವೆಚ್ಚದಲ್ಲಿ ಚಿತ್ತಾಪುರ ತಾಲ್ಲೂಕಿನ ಸನ್ನತಿ ಹಾಗೂ ಇತರೆ 75 ಜನವಸತಿ ಪ್ರದೇಶಗಳು, ಕಲಬುರಗಿ ತಾಲ್ಲೂಕಿನ ಕುಸ್ನೂರು ಹಾಗೂ ಇತರೆ ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಆಳಂದ ತಾಲ್ಲೂಕಿನಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಕೊರಳ್ಳಿ ಹಾಗೂ ಇತರೆ 4 ಗ್ರಾಮಗಳ 9 ಜನವಸತಿ ಪ್ರದೇಶಗಳು ಮತ್ತು ಮಾರ್ಗ ಮಧ್ಯದ 5 ಜನವಸತಿಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. 85 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಹಾಗೂ ಇತರೆ 8 ಗ್ರಾಮಗಳ 22 ಜನವಸತಿ ಪ್ರದೇಶಗಳಲ್ಲಿ ಯೋಜನೆಗಳು ಪ್ರಗತಿಯಲ್ಲಿವೆ. 265 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ ತಾಲ್ಲೂಕಿನ 22 ಗ್ರಾಮಗಳ 33 ಜನವಸತಿಗಳು ಮತ್ತು ಯಡ್ರಾಮಿ ತಾಲ್ಲೂಕಿನ ಆಲೂರು ಸೇರಿದಂತೆ ಇತರೆ 58 ಗ್ರಾಮಗಳ 66 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. 27 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ ತಾಲ್ಲೂಕಿನ ಕೂಡಿ ಹಾಗೂ ಇತರೆ 11 ಗ್ರಾಮಗಳಲ್ಲಿ ಯೋಜನೆ ಕಾರ್ಯಗತಗೊಳ್ಳುತ್ತಿದೆ ಎಂದು ವಿವರಿಸಿದರು.
ಇನ್ನೂ 71.5 ಕೋಟಿ ರೂ. ವೆಚ್ಚದಲ್ಲಿ ಆಳಂದ ಹಾಗೂ ಕಮಲಾಪುರ ತಾಲ್ಲೂಕಿನ ವಿಕೆ ಸಲಗರ್ ಸೇರಿದಂತೆ 16 ಗ್ರಾಮಗಳ 23 ಜನವಸತಿ ಪ್ರದೇಶಗಳಲ್ಲಿ ಹಾಗೂ 79 ಕೋಟಿ ರೂ. ವೆಚ್ಚದಲ್ಲಿ ಜೇವರ್ಗಿ ತಾಲ್ಲೂಕಿನ ಯಾಳವಾರ ಹಾಗೂ ಇತರೆ 20 ಗ್ರಾಮಗಳ 24 ಜನವಸತಿ ಪ್ರದೇಶಗಳಲ್ಲಿ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ ಎಂದರು.
ಈ ಎಲ್ಲಾ ಯೋಜನೆಗಳಿಗೆ ಈಗಾಗಲೇ ಒಟ್ಟು 887.81 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಭವಿಷ್ಯದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.