Afzalpur | ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ: ಅರುಣಕುಮಾರ್ ಪಾಟೀಲ್
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಅಫಜಲಪುರ: ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ.ವೈ.ಪಾಟೀಲ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಲಾಭ ತಲುಪಿಸುವಂತೆ ಅಧಿಕಾರಿಗಳು ಮತ್ತು ಸದಸ್ಯರು ಶ್ರಮಿಸಬೇಕು ಎಂದರು.
ಅಫಜಲಪುರದಿಂದ ಬೆಂಗಳೂರಿಗೆ ಹೆಚ್ಚಿನ ಜನ ಸಂಚಾರವಿರುವ ಹಿನ್ನೆಲೆಯಲ್ಲಿ ಅಫಜಲಪುರ ಬಸ್ ಘಟಕದಿಂದ ಶೀಘ್ರದಲ್ಲೇ ಎರಡು ಸ್ಲೀಪರ್ ಕೋಚ್ ಬಸ್‌ಗಳನ್ನು ಪ್ರಾರಂಭಿಸಲಾಗುವುದು ಎಂದ ಅವರು, ಹೊಸ ಪ್ರಜಾಸೌಧದಿಂದ ದೂರವಿರುವುದರಿಂದ ಎಲ್ಲ ಬಸ್‌ಗಳು ಅಲ್ಲಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಕಾಶ ಜಮಾದಾರ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಬದುಕಿಗೆ ಆರ್ಥಿಕ ಶಕ್ತಿ ದೊರೆತಿದ್ದು, ತಲಾ ಆದಾಯದಲ್ಲಿ ಸ್ಪಷ್ಟವಾದ ಹೆಚ್ಚಳವಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸದಸ್ಯರು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಒಟ್ಟು 44,759 ಪಡಿತರ ಕಾರ್ಡ್‌ಗಳಿದ್ದು, ಪ್ರತಿ ತಿಂಗಳು ಸುಮಾರು 18,645.85 ಮೆಟ್ರಿಕ್ ಟನ್ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 51,727 ಫಲಾನುಭವಿಗಳಿಗೆ ಪ್ರತಿ ತಿಂಗಳು ಒಟ್ಟು 10,34,54,000 ರೂ. ಜಮೆಯಾಗುತ್ತಿದೆ. ಶಕ್ತಿ ಯೋಜನೆಯಡಿ 1,45,07,668 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, 59,10,25,695 ರೂ. ಮೊತ್ತದ ಲಾಭ ದೊರೆತಿದೆ. ಗೃಹಜ್ಯೋತಿ ಯೋಜನೆಯಡಿ 42,998 ಫಲಾನುಭವಿಗಳಿಗೆ 49,29,18,174 ರೂ. ಲಾಭ ಸಿಕ್ಕಿದೆ. ಯುವನಿಧಿ ಯೋಜನೆಯಡಿ 2,829 ಫಲಾನುಭವಿಗಳಿಗೆ ಒಟ್ಟು 5,31,88,500 ರೂ. ಹಣ ಜಮೆಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಇಒ ವೀರಣ್ಣ ಕೌಲಗಿ, ಜೆಸ್ಕಾಂ ಎಇಇ ನಾಗರಾಜ ಕೆ., ಸಿಡಿಪಿಒ ಪ್ರವೀಣ್ ಹೇರೂರ, ಆಹಾರ ಇಲಾಖೆ ನಿರ್ದೇಶಕಿ ಸಾವಿತ್ರಿ, ಡಿಪೋ ಮ್ಯಾನೇಜರ್ ಅಮೀನಪ್ಪ ಭೋವಿ, ಎಇಇ ಮೈನುದ್ದೀನ್, ವಿಠ್ಠಲ್ ಸಾಹುಕಾರ ಜಾಮಗೊಂಡ, ಗಾಲಿಬ್ ಮುಜಾವರ್, ಅಂಬರೀಶ ಬುರಲಿ, ಪ್ರವೀಣ್ ಕಲ್ಲೂರ, ದತ್ತು ಘಾಣೂರ, ಅನುಸುಯಾ ಸುಲೇಕರ, ಬಿಸ್ಮಿಲ್ಲಾ ಖೇಡ, ಚಂದ್ರಕಾಂತ ತೆಲ್ಕರ ಹಾಗೂ ಇತರರು ಉಪಸ್ಥಿತರಿದ್ದರು.