ಅಫಜಲಪುರ | ಪರಿಹಾರ ವಂಚಿತ ರೈತರಿಗೆ ಪರಿಹಾರ ನೀಡುವಂತೆ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ
ಕಲಬುರಗಿ: ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಹಾದು ಹೋಗುತ್ತಿರುವ ಸೂರತ್–ಚೆನ್ನೈ ನೇರ ಸಂಪರ್ಕ ರಸ್ತೆ (ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆ) ಕಾಮಗಾರಿಯಿಂದಾಗಿ ನಷ್ಟ ಅನುಭವಿಸಿದ ರೈತರು, ತಮಗೂ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಚತುಷ್ಪಥ ರಸ್ತೆ ಯೋಜನೆಯ ಕಾಮಗಾರಿಯ ವೇಳೆ ರೈತರ ಜಮೀನುಗಳಲ್ಲಿ ನೀರಾವರಿಗಾಗಿ ಅಳವಡಿಸಿದ್ದ ಪೈಪ್ ಲೈನ್‌ಗಳು ಹಾನಿಗೊಳಗಾಗಿವೆ. ಕೆಲವರಿಗೆ ಮಾತ್ರ ಪರಿಹಾರ ನೀಡಲಾಗಿದ್ದು, ಇನ್ನುಳಿದವರಿಗೆ ನೀಡದಿರುವುದು “ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ” ಎಂಬಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಪರಿಹಾರ ವಂಚಿತ ರೈತರು ಅಫಜಲಪುರ ಪಟ್ಟಣದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ, ಬಾಕಿ ರೈತರಿಗೆ ಸಹ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಸಿದ್ದು ಸಿರಸಗಿ ಅವರ ನೇತೃತ್ವದಲ್ಲಿ ರೈತರಾದ ಶಿವಲಿಂಗಯ್ಯ ಮಠಪತಿ, ಮಹಂತಪ್ಪ ಮಾಂಗ್, ಚಂದ್ರಶೇಖರ ಮಲಗಾಣ, ಮಲ್ಲಣ್ಣ ತೆಲ್ಲೂರ್, ರಿಯಾಸ ಸೆಕ್ರೆಟರಿ, ಸಾವಿರಪ್ಪ ಪೂಜಾರಿ, ಸಿದ್ದಪ್ಪ ಹಿರೇಪೂಜಾರಿ, ಬಸಪ್ಪ ಇಂಗಳಗಿ, ಶ್ರೀಶೈಲ, ಮಹಾಂತಯ್ಯ ಮಠಪತಿ, ಶರಣಪ್ಪ ಕರ್ಕಲ್, ಶ್ರೀಮಂತ, ಮಹದೇವಪ್ಪ ತೆಲ್ಲೂರ್, ಭೀಮಣ್ಣ ಹಿರೇಪೂಜಾರಿ, ನಿಂಗಪ್ಪ ಪೂಜಾರಿ, ದಾಕ್ಷಾಯಣಿ ತಳವಾರ್, ಜೆಟ್ಟಪ್ಪ ಇಟಗಿ, ಹನುಮಂತ ಮಣ್ಣೂರ ಸೇರಿದಂತೆ ಹಲವರು ಹಾಜರಿದ್ದರು.