ಅಫಜಲಪುರ | ಬೆಳೆ ಹಾನಿಗೆ ಪರಿಹಾರ ನಿರ್ಲಕ್ಷ್ಯ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
ಕಲಬುರಗಿ: ಅಫಜಲಪುರ ತಾಲ್ಲೂಕಿನ ರೈತರು ನಿರಂತರ ಮಳೆಯ ಪರಿಣಾಮದಿಂದ ಭಾರೀ ಹಾನಿಗೊಳಗಾಗಿದ್ದಾರೆ. ಈ ಹಾನಿಗೆ ತಕ್ಷಣ ಪರಿಹಾರ ನೀಡಬೇಕಾದ ಅವಶ್ಯಕತೆ ಇದ್ದರೂ, ಸ್ಥಳೀಯ ಆಡಳಿತವು ರೈತರಿಗೆ ಸಹಾಯ ಮಾಡಲು ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ್ ಬುಧವಾರ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಫಜಲಪುರ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರು ಸಂಪೂರ್ಣ ಬೆಳೆ ನಷ್ಟದಿಂದ ಗಂಭೀರ ಸಂಕಷ್ಟದಲ್ಲಿ ಇದ್ದಾರೆ. ಆದರೆ ಸ್ಥಳೀಯ ಆಡಳಿತ ಸಮಯಕ್ಕೆ ಸರಿಯಾಗಿ ಪರಿಹಾರ ವಿತರಿಸುವಲ್ಲಿ ವಿಫಲವಾಗಿದೆ. ಇದು ರೈತ ವಿರೋಧಿ ನಡೆಯಾಗಿದೆ ಎಂದು ಹೇಳಿದರು.
ಭಾಷಣಗಳಲ್ಲಿ, ರೈತರನ್ನು ಕುರಿತು ಅನುಕಂಪದ ಮಾತುಗಳನ್ನು ಆಡುವ ಜನಪ್ರತಿನಿಧಿಗಳು, ಆ ಸಮಯದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲವೆಂಬ ಅಸಮಾಧಾನ ವ್ಯಕ್ತವಾಯಿತು. ಆಡಳಿತ ಪಕ್ಷ, ತಾಲ್ಲೂಕಿನ ರೈತರ ನೋವಿಗೆ ಸ್ಪಂದಿಸಬೇಕಾಗಿದ್ದರೂ, ನಿರ್ಲಕ್ಷ್ಯದಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎಂದು ಗುತ್ತೇದಾರ್ ಹೇಳಿದರು.
ಪ್ರಕೃತಿಯ ಆಪತ್ತಿನಿಂದ ಉಂಟಾದ ‘ತುರ್ತು ಕೃಷಿ ಸಂಕಷ್ಟ’ವನ್ನು ಸ್ಥಳೀಯ ನಾಯಕರು ಈಗಲಾದರೂ ಗಮನಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತರ ಬೇಡಿಕೆಗಳ ಮನವಿ ಪತ್ರವನ್ನು ಅಫಜಲಪುರ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ತಹಶೀಲ್ದಾರ್ ಸಂಜು ಕುಮಾರ್ ದಾಸರ್ ತಿಳಿಸಿದಂತೆ, ಅಫಜಲಪುರ ತಾಲೂಕಿನಲ್ಲಿ ನಡೆಸಲಾದ ಸಮೀಕ್ಷೆ ಪ್ರಕಾರ 204 ಮನೆಗಳು ಹಾನಿಗೊಳಗಾಗಿದ್ದು, 4 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ರೈತರ ಜಮೀನಿನ ಸಮೀಕ್ಷೆ ಆಗಸ್ಟ್ ತಿಂಗಳಲ್ಲಿ ನಡೆದಿದ್ದು, ಸೆಪ್ಟೆಂಬರ್ ತಿಂಗಳಲ್ಲಿಯೂ ಸಮೀಕ್ಷೆ ಮುಂದುವರಿಯುತ್ತದೆ. ಸರಕಾರಕ್ಕೆ ಸಮೀಕ್ಷಾ ವರದಿ ಬೇಗ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.