ಅಫಜಲಪುರ | ಕೇಂದ್ರ ಸರಕಾರದಿಂದ ರೈತರಿಗೆ ಅನ್ಯಾಯ: ಜೆ.ಎಂ.ಕೊರಬು
ಅಫಜಲಪುರ: ಈ ಹಿಂದೆ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು, ವಿದೇಶಿ ವಸ್ತುಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಅಧಿಕಾರಕ್ಕೆ ಬಂದು ಈಗ ಸ್ವದೇಶಿ ರೈತರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ.ಕೊರಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಿ ಉತ್ಪನ್ನಗಳಿಗೆ ಮಾರು ಹೋಗುತ್ತಿದ್ದು, ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡದೆ ಅನ್ಯಾಯ ಮಾಡುತ್ತಿದೆ. ಈ ಹಿಂದೆ ಎಪಿಎಂಸಿ ರದ್ದು ಮಾಡಿ ರೈತರ ಬೆನ್ನು ಮುರಿಯುವ ಕೆಲಸ ಮಾಡಿದೆ. ಅನ್ಯ ದೇಶಗಳಿಗಿಂತ ನಮ್ಮ ದೇಶದಲ್ಲಿ ಸಕ್ಕರೆ ಹೆಚ್ಚಾಗಿ ಉತ್ಪನ್ನ ಮಾಡುತ್ತಿದ್ದರೂ ಸಹ ಬೇರೆ ದೇಶಗಳಿಂದ ಆಮದು ಮಾಡಿಕೊಂಡು ನಮ್ಮ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು.
ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲಕರ ಜತೆ ಚರ್ಚೆ ನಡೆಸಿ ಉತ್ತಮ ಬೆಲೆ ಸಿಗುವಂತೆ ಮಾಡಿದೆ. ಅದೇ ರೀತಿ ಎಪಿಎಂಸಿ ರದ್ದು ಪಡಿಸುವುದಕ್ಕಿಂತ ಮುಂಚೆ ತೊಗರಿಗೆ 7,500 ರೂ., 8,500 ರೂ. ಬೆಂಬಲ ಬೆಲೆ ರೈತರಿಗೆ ಸಿಕ್ಕಿದೆ ಎಂದರು.
ಎಪಿಎಂಸಿ ರದ್ದು ಮಾಡಿದ ಮೇಲೆ ಆಸ್ಟ್ರೇಲಿಯಾ, ಸುಡಾನ್, ಕೆನಡಾ, ರಷ್ಯಾ ಹೀಗೆ ಅನ್ಯ ದೇಶಗಳಿಂದ ತೊಗರಿಯನ್ನು ಆಮದು ಮಾಡಿಕೊಂಡು ಕೇಂದ್ರ ಸರ್ಕಾರ ನಮ್ಮ ದೇಶದ ರೈತರಿಗೆ ಮೋಸ ಮಾಡುತ್ತಿದೆ. ಆದರೆ ಆ ತೊಗರಿಯೂ ಜನಸಾಮಾನ್ಯರು ತಿನ್ನಲು ಯೋಗ್ಯವಿಲ್ಲದ ತೊಗರಿ ಆಮದು ಮಾಡಿಕೊಂಡು ನೇರವಾಗಿ ನಮ್ಮ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ನಮ್ಮ ಭಾಗದಲ್ಲಿ ಉತ್ತಮವಾದ ತೊಗರಿ ಬೆಳೆಯುತ್ತಿದ್ದರೂ ಏಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡುತ್ತಿಲ್ಲ. ಈಗ ರಾಜ್ಯ ಸರ್ಕಾರವೇ ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಪ್ರತಿ ಕ್ವಿಂಟಲ್ ಗೆ 8 ಸಾವಿರ ರೂ. ಬೆಂಬಲ ಬೆಲೆ ನೀಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವು ಬೆಂಬಲ ಬೆಲೆ ನೀಡಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.