Afzalpur | ಭೀಮಾನದಿಗೆ ನೀರು ಬಿಡುಗಡೆಗೆ ಆಗ್ರಹ: ಬೇಡಿಕೆ ಈಡೇರದಿದ್ದರೆ ಜು.20ರಂದು ರಾಜ್ಯ ಹೆದ್ದಾರಿ ತಡೆ ಎಚ್ಚರಿಕೆ
ಅಫಜಲಪುರ, ಜು.17: ಭೀಮಾನದಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಫಜಲಪುರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಜುಲೈ 20ರಂದು ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡರಾದ ರಮೇಶ್ ಶೆಟ್ಟಿ, ಭೀಮರಾವ ಗೌರ, ಶ್ರೀಮಂತ ಬಿರಾದಾರ, ರಮೇಶ್ ಪಾಟೀಲ, ಶಾಂತು ಅಂಜುಟಗಿ ಹಾಗೂ ಗುರು ಚಾಂದಕವಟೆ, ಧರಣಿ ಆರಂಭವಾಗಿ ನಾಲ್ಕು ದಿನಗಳಾದರೂ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ನಾರಾಯಣಪುರ ಜಲಾಶಯದಿಂದ 1.5 ಟಿಎಂಸಿ ನೀರು ಬಿಡುಗಡೆ ಮಾಡಿದರೂ ಅದು ಭೀಮಾನದಿಗೆ ತಲುಪುವ ಭರವಸೆ ಇಲ್ಲ. ಕಾವೇರಿ ನದಿಗೆ ನೀಡುವಷ್ಟೇ ಆದ್ಯತೆಯನ್ನು ಭೀಮಾನದಿಗೂ ನೀಡಬೇಕು. ಅಭಿವೃದ್ಧಿ ಎಂದರೆ ನೀರು, ವಿದ್ಯುತ್ ಹಾಗೂ ರೈತರಿಗೆ ನ್ಯಾಯಯುತ ಬೆಂಬಲ ಬೆಲೆ ಒದಗಿಸುವುದಾಗಿದೆ ಎಂದು ಹೇಳಿದರು.
ಉಜನಿ ಅಣೆಕಟ್ಟಿನಿಂದ ಭೀಮಾನದಿಗೆ ನೀರು ಬಿಡುಗಡೆ ಕುರಿತು ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಶಾಸಕರು ಹಾಗೂ ಸಚಿವರ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಮೇಶ್ ಶೆಟ್ಟಿ ಮತ್ತು ರಮೇಶ್ ಪಾಟೀಲ ಮಾತನಾಡಿ, ದೇವಲಗಾಣಗಾಪುರ, ಘತ್ತರಗಾ ಸೇರಿದಂತೆ ಭೀಮಾನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಭಕ್ತರ ಸ್ನಾನಕ್ಕೆ ತೀವ್ರ ನೀರಿನ ಕೊರತೆ ಉಂಟಾಗಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಗುರು ಚಾಂದಕವಟೆ ಹಾಗೂ ಶಾಂತು ಅಂಜುಟಗಿ ಮಾತನಾಡಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡಕ್ಕೂ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಭಾನುವಾರದೊಳಗೆ ಭೀಮಾನದಿಗೆ ನೀರು ಹರಿಸದಿದ್ದರೆ ಜುಲೈ 20ರಂದು ರಾಜ್ಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣರಾವ ಪಾಟೀಲ, ಗುರು ಹುಲ್ಲೂರ, ನೂರುಅಹ್ಮದ್ ಭಾಗವಾನ, ಅರ್ಜುನ ಸೋಮಜಾಳ, ಶ್ರೀಕಾಂತ ದಿವಾಣಜಿ, ಮಹಾಂತೇಶ ಪಾಟೀಲ, ಚಂದು ಬನ್ನೆಟ್ಟಿ, ಮಹಿಬೂಬ ಸಿಧನೂರ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.