Kalaburagi | ಮಾಹಿತಿ ನೀಡದ ಪಿಆರ್‌ಇಡಿ ಅಭಿಯಂತರರಿಗೆ 20 ಸಾವಿರ ರೂ. ದಂಡ: ರಾಜ್ಯ ಮಾಹಿತಿ ಆಯೋಗ ಆದೇಶ

Update: 2026-07-17 19:22 IST

ಕಲಬುರಗಿ : ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡದೇ, ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಚಾರಣೆಗೂ ಪದೇ ಪದೇ ಗೈರುಹಾಜರಾಗಿದ್ದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (ಪಿಆರ್‌ಇಡಿ) ಕಾಳಗಿ ಉಪವಿಭಾಗದ ಸಹಾಯಕ ಕಾರ್ಯಪಾಲನಾ ಅಭಿಯಂತರ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ರಾಜಕುಮಾರ ಅವರಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠವು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ಸಾವಿರ ರೂ. ನಂತೆ ಒಟ್ಟು 20 ಸಾವಿರ ರೂ. ದಂಡ ವಿಧಿಸಿದೆ.

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀನಾಥ ಕೋಡ್ಲಿ ಅವರು, 2021-22ನೇ ಸಾಲಿನ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಕೋಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಛಾವಣಿ ದುರಸ್ತಿ ಕಾಮಗಾರಿಗಳ ಅನುದಾನ, ಬಿಲ್ ಪಾವತಿ ಸೇರಿದಂತೆ ಸಂಬಂಧಿತ ದಾಖಲೆಗಳ ಮಾಹಿತಿಗಾಗಿ 2024ರ ಫೆಬ್ರವರಿ 26ರಂದು ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರಡಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ನಿಗದಿತ ಅವಧಿಯಲ್ಲಿ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಅವರು 2024ರ ಏಪ್ರಿಲ್ 15ರಂದು ಪ್ರಥಮ ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿಯೂ ಮಾಹಿತಿ ಸಿಗದ ಕಾರಣ 2024ರ ಜುಲೈ 6ರಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ ಸಿಂಗ್ ಅವರು, ಸಾರ್ವಜನಿಕ ಮಾಹಿತಿ ಅಧಿಕಾರಿ ರಾಜಕುಮಾರ ಅವರಿಗೆ ಹಲವು ಬಾರಿ ನೋಟಿಸ್ ನೀಡಿದರೂ 2026ರ ಜನವರಿ 24, ಫೆಬ್ರವರಿ 24 ಹಾಗೂ ಜುಲೈ 15ರಂದು ನಡೆದ ವಿಚಾರಣೆಗಳಿಗೆ ಗೈರುಹಾಜರಾಗಿರುವುದು ಹಾಗೂ ಅರ್ಜಿದಾರರಿಗೆ ಮಾಹಿತಿ ಒದಗಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳಲ್ಲಿ ಒಟ್ಟು 20 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ದಂಡದ ಮೊತ್ತವನ್ನು ಪಾವತಿಸಿ ಅದರ ರಶೀದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಹಾಗೂ ಅರ್ಜಿದಾರರು ಕೋರಿದ ಸಂಪೂರ್ಣ ಮಾಹಿತಿಯನ್ನು ಒದಗಿಸಿ ದಾಖಲೆಗಳನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸುವಂತೆ ಆಯೋಗ ನಿರ್ದೇಶಿಸಿದೆ. ಆದೇಶ ಪಾಲಿಸದಿದ್ದರೆ ಮಾಹಿತಿ ಹಕ್ಕು ಕಾಯ್ದೆಯ ಕಲಂ 20(2)ರಡಿ ಇಲಾಖಾ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ, ಪ್ರಥಮ ಮೇಲ್ಮನವಿ ಪ್ರಾಧಿಕಾರ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲನಾ ಅಭಿಯಂತರ ರಜನಿಕಾಂತ ಅವರಿಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಅಧಿಕಾರಿಗಳು ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಹಾಗೂ ಆಯೋಗದ ಆದೇಶಗಳ ಅನುಷ್ಠಾನ ಖಚಿತಪಡಿಸಿಕೊಳ್ಳುವಂತೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News