Chitapur | ಸ್ಥಗಿತಗೊಂಡ ಮಾಸಾಶನ ಪುನರಾರಂಭಕ್ಕೆ ಆಗ್ರಹಿಸಿ ಮನವಿ

Update: 2026-07-17 19:27 IST

ಚಿತ್ತಾಪುರ : ಹಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ ಹಾಗೂ ಮನಸ್ವಿನಿ ಯೋಜನೆಯ ಮಾಸಾಶನವನ್ನು ತಕ್ಷಣ ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಮಾತನಾಡಿ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದು, ಫಲಾನುಭವಿಗಳು ತಹಶೀಲ್ದಾರ್ ಕಚೇರಿ ಹಾಗೂ ಅಂಚೆ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ದೂರಿದರು.

ಪ್ರತಿ ತಿಂಗಳು ಮಾಸಾಶನ ಸಿಗದೇ ಇರುವುದರಿಂದ ಫಲಾನುಭವಿಗಳ ಜೀವನ ನಿರ್ವಹಣೆ ದುಸ್ತರವಾಗಿದೆ. ಯುಡಿಐಡಿ (UDID) ಕಾರ್ಡ್ ಹೊಂದಿದ್ದರೂ ಅಂಗವಿಕಲರಿಗೆ ಮಾಸಾಶನ ದೊರೆಯುತ್ತಿಲ್ಲ. ಆದಾಯ ಪ್ರಮಾಣಪತ್ರದಲ್ಲಿ ಹೆಚ್ಚಿನ ಆದಾಯ ನಮೂದಿಸಲಾಗುತ್ತಿರುವ ಕಾರಣ ಅರ್ಜಿಗಳು ತಿರಸ್ಕೃತವಾಗುತ್ತಿದ್ದು, ಅನೇಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕ 30 ಸಾವಿರ ರೂ. ಆದಾಯದ ಪ್ರಮಾಣಪತ್ರ ನೀಡಬೇಕು. ಹೆಚ್ಚಿನ ಆದಾಯ ನಮೂದಿಸುವುದರಿಂದ ಅರ್ಜಿಗಳು ಸ್ವೀಕಾರವಾಗದೆ ಎರಡು ವರ್ಷಗಳಿಂದ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಸಲ್ಲಿಸಿದರೂ ಅರ್ಜಿಗಳು ತಿರಸ್ಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ಹಾಗೂ ಮನಸ್ವಿನಿ ಯೋಜನೆಗಳ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಗದೇವಪ್ಪ ಭಾಗೋಡಿ, ಚಂದ್ರು ಕಾಶಿ, ಮಲ್ಲಿಕಾರ್ಜುನ ನಾಲವಾರ, ಸಂತೋಷ ಕಟ್ಟಿ, ಕಿಶನ್ ತಾಂಡಾ, ಮಲ್ಲಿನಾಥ ಪಾಟೀಲ, ಕಲ್ಯಾಣಿ ಭೀಮಶಾ, ರವೀಂದ್ರ ತೇಲ್ಯೂರ್, ಸಾಬಣ್ಣ ಬಿಹರಪೇಟ್, ಮೋಗಲಪ್ಪ ಕುಂಬಾರ, ಈಶ್ವರ ಗೊಂಡಗೋ, ಅಂಜುಮ್ ಖಾಜಿ, ಮಂಜೂರು ಸಾಬ್, ಮಲ್ಲಿಕಾರ್ಜುನ ಮುಗುಳಕ‌ರ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News