Kalaburagi | ರೌಡಿ ಶೀಟರ್ ಗುರುರಾಜ ದಮ್ಮೂರ ಗಡಿಪಾರು

Update: 2026-07-17 19:24 IST

ಕಲಬುರಗಿ : ನಗರದ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ‘ಎ’ ವರ್ಗದ ರೌಡಿ ಶೀಟರ್ ಗುರುರಾಜ ದೇವಿಂದ್ರಪ್ಪ ದಮ್ಮೂರ (38) ಅವರನ್ನು ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55ರಡಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ಆದೇಶ ಹೊರಡಿಸಿದೆ.

ಗಣೇಶನಗರ ನಿವಾಸಿಯಾಗಿರುವ ಗುರುರಾಜ ದಮ್ಮೂರ ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಆತನ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. 2011ರಿಂದ 2026ರವರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ), ಸಿಆರ್‌ಪಿಸಿ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ರೂಢಿಗತ ಅಪರಾಧಿ ಹಾಗೂ ‘ಎ’ ವರ್ಗದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ.

ಆರೋಪಿತನು ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ದೊಂಬಿ, ಮಾರಕಾಯುಧಗಳೊಂದಿಗೆ ಕಾನೂನುಬಾಹಿರ ಚಟುವಟಿಕೆ, ಕೊಲೆ, ಮಾರಣಾಂತಿಕ ಹಲ್ಲೆ, ದಲಿತರ ಮೇಲಿನ ದೌರ್ಜನ್ಯ, ಜೀವ ಬೆದರಿಕೆ ಸೇರಿದಂತೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕರಲ್ಲಿ ಶಾಂತಿ, ನೆಮ್ಮದಿ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ಗಡಿಪಾರು ಕ್ರಮ ಕೈಗೊಳ್ಳುವಂತೆ ಎಂ.ಬಿ. ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಖಾಜಾ ಪಾಶಾ ವರದಿ ಸಲ್ಲಿಸಿದ್ದರು.

ಈ ವರದಿಯ ಆಧಾರದ ಮೇಲೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ನಿರ್ದೇಶನದಂತೆ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶಾಲೂ, ಐಪಿಎಸ್ ಅವರು ವಿಚಾರಣೆ ನಡೆಸಿ, ಗುರುರಾಜ ದಮ್ಮೂರ ಅವರನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News