Afzalpur | ಸೊನ್ನ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಕ್ಕೆ ರೈತ ಸಂಘ ಆಗ್ರಹ

Update: 2026-07-28 16:59 IST

ಅಫಜಲಪುರ: ಭೀಮಾ ನದಿಯಲ್ಲಿ ಸಂಗ್ರಹವಾಗುವ ನೀರನ್ನು ಸೊನ್ನ ಬ್ಯಾರೇಜ್‌ನಲ್ಲಿ ಸಮರ್ಪಕವಾಗಿ ತಡೆಹಿಡಿದು, ಭೀಮಾ ಏತ ನೀರಾವರಿ ಯೋಜನೆಯಡಿ ರೈತರಿಗೆ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಚೂನಪ್ಪ ಪೂಜಾರಿ ಬಣ) ಸರ್ಕಾರವನ್ನು ಆಗ್ರಹಿಸಿದೆ.

ರೈತ ಮುಖಂಡರಾದ ಸಿದ್ದು ದಣ್ಣೂರ ಹಾಗೂ ಅಶೋಕ ಹೂಗಾರ ಮಾತನಾಡಿ, ಸೊನ್ನ ಬ್ಯಾರೇಜ್‌ನಲ್ಲಿ ಸಂಗ್ರಹವಾಗುವ ನೀರನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಂಡು ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು. ದೇವಲ್ ಗಾಣಗಾಪುರ ಸೇತುವೆಯ ಗೇಟ್‌ಗಳನ್ನು ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಗೇಟ್‌ಗಳಾಗಿ ಪರಿವರ್ತಿಸುವ ಮೂಲಕ ನೀರಿನ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬೇಕು ಎಂದು ಒತ್ತಾಯಿಸಿದರು.

ಗುಳನೂರು ಹಾಗೂ ಮೊನಟಗಾ ಬ್ರಿಡ್ಜ್-ಕಂ-ಬ್ಯಾರೇಜ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ನೀರನ್ನು ತಡೆಹಿಡಿಯುವ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಭೀಮಾ ಏತ ನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲಾ ಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು. ಜೊತೆಗೆ ಏತ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಶೀಘ್ರ ಸಭೆ ನಡೆಸಿ ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು. ಅಲ್ಲದೆ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ತಕ್ಷಣ ಮೇವು ಕೇಂದ್ರಗಳನ್ನು ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ ಮಲಗೊಂಡ, ಕಾರ್ಯದರ್ಶಿ ಶರಣು ಕವಲಗಿ, ಖಜಾಂಚಿ ಲಗಮಣ್ಣ ಪೂಜಾರಿ, ಮುಖಂಡರಾದ ಸಿದ್ದು ದಣ್ಣೂರ, ಅಶೋಕ್ ಹೂಗಾರ, ಶರಣಗೌಡ ಪಾಟೀಲ್ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಚೂನಪ್ಪ ಪೂಜಾರಿ ಬಣ) ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News