ಸೇಡಂ | ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸಲು ಡಿಸಿ ಸೂಚನೆ

Update: 2026-07-28 22:11 IST

ಸೇಡಂ: ಪಟ್ಟಣದ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾಂಗಣಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ನಿರ್ವಹಣೆ, ಕ್ರೀಡಾಪಟುಗಳಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ಕ್ರೀಡಾ ಚಟುವಟಿಕೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ತ್ವರಿತವಾಗಿ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಅವರು, ವಿದ್ಯುತ್ ಲೈನ್ ಸಮಸ್ಯೆ, ಶೌಚಾಲಯ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಲು ಸರ್ಕಾರಕ್ಕೆ ಪಾವತಿಸಬೇಕಾದ ವೆಚ್ಚವನ್ನು ಭರಿಸಿ ತರಬೇತಿ ಆರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ತರಬೇತುದಾರರಿಗೆ ಅಗತ್ಯ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಹೊರಾಂಗಣ ಕ್ರೀಡಾಂಗಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಹಾಗೂ ಮೈದಾನದ ನಿರ್ವಹಣೆ ಪರಿಶೀಲಿಸಿದ ಅವರು, ಕ್ರೀಡಾಪಟುಗಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ ಮಳಖೇಡ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಿದರು. ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವುದನ್ನು ಗಮನಿಸಿದ ಡಿಸಿ, ತಕ್ಷಣ ಕೀಲಿ ತರಿಸುವಂತೆ ಸೂಚಿಸಿದರು. ಸಿಬ್ಬಂದಿ ಬಳಿ ಕೀಲಿ ಇಲ್ಲದಿರುವುದು ತಿಳಿದ ಬಳಿಕ ಬೀಗ ಮುರಿದು ರೋಗಿಗಳ ಬಳಕೆಗೆ ಅವಕಾಶ ಕಲ್ಪಿಸಲಾಯಿತು.

ಆಶಾ ಕಿರಣ ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ಪೊರೆ ಚಿಕಿತ್ಸೆಯ ಆನ್‌ಲೈನ್ ದಾಖಲಾತಿ ಕುರಿತು ಪರಿಶೀಲಿಸಿದಾಗ, ಸಿಬ್ಬಂದಿ ಎಲ್ಲಾ ಮಾಹಿತಿ ನಮೂದಿಸಲಾಗಿದೆ ಎಂದು ತಿಳಿಸಿದರು. ಆದರೆ ಜಿಲ್ಲಾಧಿಕಾರಿಗಳು ಸ್ವತಃ ಪರಿಶೀಲಿಸಿದಾಗ ದಾಖಲೆಗಳು ಲಭ್ಯವಾಗಿರಲಿಲ್ಲ. ಹಿರಿಯ ಅಧಿಕಾರಿಗೆ ತಪ್ಪು ಮಾಹಿತಿ ನೀಡಿದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಅಲ್ಟ್ರಾಟೆಕ್ (ರಾಜಶ್ರೀ) ಸಿಮೆಂಟ್ ಕಾರ್ಖಾನೆಯ ಸಿಎಸ್‌ಆರ್ ನಿಧಿ ಬಳಕೆ, ಕಲುಷಿತ ನೀರು ಪೂರೈಕೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡದಿರುವ ಕುರಿತು ಗ್ರಾಮಸ್ಥರು ಸಲ್ಲಿಸಿದ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಲು ಅಗತ್ಯ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ, ಕೆ.ಆರ್.ಐ.ಡಿ.ಎಲ್ ಇಂಜಿನಿಯರ್ ನೀಲಕಂಠ, ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ, ಕ್ರೀಡಾಂಗಣದ ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಕಾಶಿನಾಥ ಗುಂಡಳ್ಳಿ, ಟಿಎಚ್‌ಒ ಸಂಜುಕುಮಾರ ಪಾಟೀಲ್, ಡಾ. ನವೀನ, ಪಿಡಿಒ ಸಂದೀಪ ಗುತ್ತೇದಾರ, ಗ್ರಾಮ ಲೆಕ್ಕಿಗ ಚಂದ್ರಕಾಂತ ಬಾವೆ, ದೊಡ್ಡಪ್ಪ ಜಿ ಮಳಖೇಡ, ಶ್ರೀನಿವಾಸ ಸಂಗಾವಿ, ಶ್ರೀಶೈಲ ಪೂಜಾರಿ, ಕೀರ್ತಿಕುಮಾರ ಮಾಳಗಿ, ಶಿವರಾಜ ವಿಶ್ವಕರ್ಮ, ರಾಜಪ್ಪ ಮಂಗ, ಪ್ರಶಾಂತ ದೊಡ್ಮನಿ, ಭಗವಾನ ಬೊಚಿನ್, ಕೌಶಿಪ್ ಖಾನ್, ಸಂತೋಷ ಪೂಜಾರಿ, ಆಸ್ಪತ್ರೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News