Kalaburagi | ಕಲ್ಯಾಣ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಪ್ರತಿಭಟನೆ

Update: 2026-07-28 18:55 IST

ಕಲಬುರಗಿ : ಎಲ್ ನಿನೊ ಪರಿಣಾಮದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸಮಗ್ರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಕಾರ್ಯಕರ್ತರು ಮಂಗಳವಾರ ಹುಮನಾಬಾದ್ ಕ್ರಾಸ್ ಸಮೀಪ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಕಲಬುರಗಿ ಜಿಲ್ಲೆಯ ಆರ್ಥಿಕತೆ ಪ್ರಮುಖವಾಗಿ ತೊಗರಿ ಬೆಳೆಯನ್ನು ಅವಲಂಬಿಸಿದ್ದು, ಈ ವರ್ಷ ಎಲ್ ನಿನೊ ಪರಿಣಾಮದಿಂದ ಸಮರ್ಪಕ ಮಳೆಯಾಗದೆ ಮುಂಗಾರು ಬಿತ್ತನೆ ಸಂಪೂರ್ಣ ಕುಂಠಿತಗೊಂಡಿದೆ. ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ವಾಡಿಕೆಯಷ್ಟು ಮಳೆಯಾಗದ ಕಾರಣ ಸಾಲ ಮಾಡಿ ಖರೀದಿಸಿದ ಬೀಜ ಮತ್ತು ರಸಗೊಬ್ಬರಗಳು ಬಳಕೆಯಾಗದೆ ಉಳಿದಿವೆ. ಹಲವೆಡೆ ಬಿತ್ತನೆಯೇ ನಡೆದಿಲ್ಲ. ಬಿತ್ತನೆಯಾದ ಪ್ರದೇಶಗಳಲ್ಲೂ ಹೆಸರು, ಉದ್ದು, ಸೋಯಾಬೀನ್, ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಒಣಗಿ ಹಾನಿಗೊಳಗಾಗಿವೆ ಎಂದು ದೂರಿದರು.

ಭೀಮಾ ನದಿಯಲ್ಲಿ ನೀರಿನ ಕೊರತೆಯಿಂದ ಕಬ್ಬು ಬೆಳೆಗೂ ಹಾನಿಯಾಗುತ್ತಿದ್ದು, ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ತಕ್ಷಣ ಬಿಡುಗಡೆ ಮಾಡಿ ಭೀಮಾ ನದಿಗೆ ಹರಿಸಬೇಕು ಎಂದು ಒತ್ತಾಯಿಸಿದರು.

ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆ ಉಂಟಾಗಿ ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಎದುರಾಗಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕೇಂದ್ರದ ಅಧ್ಯಯನ ತಂಡವನ್ನು ಕಳುಹಿಸಿ ಬರ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಹಿಂಗಾರು ಬಿತ್ತನೆಗೆ ಉಚಿತ ಬೀಜ ಮತ್ತು ರಸಗೊಬ್ಬರ ವಿತರಣೆ, ರಾಷ್ಟ್ರೀಕೃತ ಬ್ಯಾಂಕುಗಳ ಕೃಷಿ ಸಾಲ ಮರುಪಾವತಿಗೆ ಕಾಲಾವಕಾಶ ವಿಸ್ತರಣೆ ಹಾಗೂ ಸಾಲ ಮನ್ನಾ, ಪ್ರತಿ ಎಕರೆಗೆ 30,000 ರೂ. ಬರ ಪರಿಹಾರ, ಒಣಗಿದ ಕಬ್ಬಿಗೆ ಪ್ರತಿ ಎಕರೆಗೆ 50,000 ರೂ. ಪರಿಹಾರ, ಬೆಳೆ ವಿಮೆ ಹಾಗೂ ಬಾಕಿ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ, ರೈತರ ಆತ್ಮಹತ್ಯೆಗೊಳಗಾದ ಕುಟುಂಬಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಬರ ಪರಿಹಾರ ಕಾಮಗಾರಿಗಳ ಆರಂಭ, ಜಾನುವಾರುಗಳಿಗೆ ಗೋಶಾಲೆಗಳ ಸ್ಥಾಪನೆ ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ನಾಗೇಂದ್ರ ಥಂಬೆ, ಸಾಜಿದ್ ಅಹ್ಮದ್, ಉಮಾಪತಿ ಪಾಟೀಲ, ಕರೆಪ್ಪ ಕರಗೊಂಡ, ಮಂಜುಳಾ ಭಜಂತ್ರಿ, ಮಹಾದೇವಿ ಭಜಂತ್ರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ರೈತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News