ಆಳಂದದಲ್ಲಿ ಜೆಡಿಎಸ್‌ಗೆ ಪದಾಧಿಕಾರಿಗಳ ನೇಮಕ : ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

Update: 2026-07-28 20:55 IST

ಆಳಂದ: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಪಟ್ಟಣದಲ್ಲಿರುವ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನಿವಾಸದ ಪಕ್ಷದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಘೋಷಣೆ, ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಸನ್ಮಾನ ಸಮಾರಂಭ ಉತ್ಸಾಹದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ವರಿ ಎಸ್. ವಾಲಿ, ರಾಜಕೀಯ ಅಧಿಕಾರಕ್ಕಾಗಿ ಅಲ್ಲ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿದೆ. ಕ್ಷೇತ್ರದ ಪ್ರತಿಯೊಂದು ಹಳ್ಳಿ, ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಿಜ್ವಾನ್ ಅಹ್ಮದ್ ಮಾತನಾಡಿ, ಮಹೇಶ್ವರಿ ವಾಲಿ ಅವರು ಆಳಂದ ಕ್ಷೇತ್ರದಲ್ಲಿ ಜನಸಾಮಾನ್ಯರ ಪರವಾಗಿ ನಿರಂತರ ಧ್ವನಿಯಾಗಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿರುವ ನಾಯಕತ್ವ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ಕ್ಷೇತ್ರದಲ್ಲಿ ಹಿಂದೆ ಜೆಡಿಎಸ್‌ನಿಂದ ಶಾಸಕರಾಗಿ ಸೇವೆ ಸಲ್ಲಿಸಿದ ಬಿ.ಆರ್. ಪಾಟೀಲ ಹಾಗೂ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ನಾಯಕತ್ವವನ್ನು ಜನರು ಕಂಡಿದ್ದಾರೆ. ಇದೀಗ ಮಹೇಶ್ವರಿ ವಾಲಿ ಅವರು ಹೊಸ ನಾಯಕತ್ವದೊಂದಿಗೆ ಜನರ ವಿಶ್ವಾಸ ಗಳಿಸುತ್ತಿದ್ದು, 2028ರ ಚುನಾವಣೆಯಲ್ಲಿ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ. ಕಾರ್ಯಕರ್ತರು ಈಗಿನಿಂದಲೇ ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಮುಖಂಡರು ಹೇಳಿದರು.

ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತಿದ್ದು, ಆಳಂದ ಕ್ಷೇತ್ರದಲ್ಲೂ ಸಂಘಟನೆಯನ್ನು ವಿಸ್ತರಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕವನ್ನು ಘೋಷಿಸಲಾಯಿತು. ತಾಲೂಕು ಅಧ್ಯಕ್ಷರಾಗಿ ರಫೀಕ್ ಇನಾಮದಾರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಸೈಯದ್ ಜಾಕೀರ್ ಅಹ್ಮದ್ ಹಾಗೂ ಮಶಾಕ್ ಢಾಂಗೆ ಅವರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪಟ್ಟಣದ ವೈದ್ಯ ಡಾ. ಶಂಕರ ಸೂರ್ಯವಾಸೆ, ಗುರುಸ್ವಾಮಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಅವರನ್ನು ಮಹೇಶ್ವರಿ ಎಸ್. ವಾಲಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಪಕ್ಷದ ಶಾಲು ಹೊದಿಸಿ ಸನ್ಮಾನಿಸಿದರು.

ಜಿಲ್ಲಾ ಉಪಾಧ್ಯಕ್ಷ ಮಹಾಂತಪ್ಪ ಮದರಿ, ಗ್ರಾಮೀಣ ಘಟಕದ ಅಧ್ಯಕ್ಷ ಗಂಗಾಧರ ಪಾಂಚಾಳ, ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಮಾಜಿ ಅಧ್ಯಕ್ಷ ಹಣಮಯ್ಯ ಗುತ್ತೇದಾರ ಸೇರಿದಂತೆ ಪಕ್ಷದ ಹಲವು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News