Kalaburagi | ರವಿಚಂದ್ರ ಗುತ್ತೇದಾರ್‌ ಕೊಲೆ ಪ್ರಕರಣ : ಐವರು ಆರೋಪಿಗಳ ಬಂಧನ

Update: 2026-07-28 20:59 IST

ರವಿಚಂದ್ರ ಗುತ್ತೇದಾರ್ ಮೃತ ವ್ಯಕ್ತಿ

ಕಲಬುರಗಿ: ನಗರದ ಎಂ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರವಿಚಂದ್ರ ಗುತ್ತೇದಾರ್‌ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೆಬಿಎನ್ ದರ್ಗಾ ಸಮೀಪದ ನಿವಾಸಿ ಅಬ್ದುಲ್ ಇಮ್ತಿಯಾಜ್ (38), ಚೋಟಾ ರೋಜಾದ ಅಬ್ದುಲ್ ಸಮೀರ್ (29), ಯಾದುಲ್ಲಾ ಕಾಲೋನಿಯ ಮೊಹಮ್ಮದ್ ಸರ್ಫರಾಜ್ (29), ಹೈದ್ರಾಬಾದ್ ಮೂಲದ ಮೊಹಮ್ಮದ್ ಖಲೀಲ್ (29) ಹಾಗೂ ಮಿಲ್ಲತ್ ನಗರದ ಮೊಹಮ್ಮದ್ ಫಸಿಯುದ್ದೀನ್ (34) ಎಂದು ಗುರುತಿಸಲಾಗಿದೆ.

ರವಿಚಂದ್ರ ಗುತ್ತೇದಾರ ಅವರ ಪತ್ನಿ ಜಯಶ್ರೀ ನೀಡಿದ ದೂರಿನ ಮೇರೆಗೆ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ತನಿಖಾ ತಂಡಗಳನ್ನು ರಚಿಸಿದ್ದ ಪೊಲೀಸರು, ತೀವ್ರ ಕಾರ್ಯಾಚರಣೆ ನಡೆಸಿ ಕೊಲೆ ನಡೆದ ಎರಡು ದಿನಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರ್ಶನಗರ ನಿವಾಸಿಯಾಗಿದ್ದ ರವಿಚಂದ್ರ ಗುತ್ತೇದಾರ ಅವರು ಹುಮನಾಬಾದ್ ರಿಂಗ್‌ರೋಡ್ ಸಮೀಪ ಟೀ ಪಾಯಿಂಟ್ ನಡೆಸುತ್ತಿದ್ದರು. ಜುಲೈ 26ರ ರಾತ್ರಿ ಮನೆಯಿಂದ ಹೊರಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

ಈ ಹಿಂದೆ ರೋಜಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಹಳೆಯ ದ್ವೇಷದಿಂದ ಕೃತ್ಯ ನಡೆದಿರಬಹುದು ಎಂದು ಕುಟುಂಬದವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರವಿಚಂದ್ರ ಗುತ್ತೇದಾರ ಅವರು 2020ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ಆ ಪ್ರಕರಣದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಆರೋಪಿಗಳ ಪೈಕಿ ಒಬ್ಬನ ಸಹೋದರನ ಸಾವಿಗೆ ಸಂಬಂಧಿಸಿದ ವೈಯಕ್ತಿಕ ದ್ವೇಷವೂ ಕೊಲೆಗೆ ಕಾರಣವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಟೊ ರಿಕ್ಷಾ ಹಾಗೂ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಎಂ.ಬಿ. ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News