ಕಲಬುರಗಿಯನ್ನು ಬರಪೀಡಿತ ಘೋಷಿಸಿ, ರೈತರ ಸಾಲ ಮನ್ನಾ ಮಾಡಲು ನಾಗೇಂದ್ರ ಥಂಬೆ ಆಗ್ರಹ
ಕಲಬುರಗಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಲಬುರಗಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಾಗೂ ಹಿಂಗಾರು ಹಂಗಾಮಿಗಾಗಿ ರೈತರು ಸಾಲ ಮಾಡಿ ಜಮೀನು ಸಿದ್ಧಪಡಿಸಿ ಬೀಜ ಮತ್ತು ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಆದರೆ ಸಮರ್ಪಕ ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ರಾಜ್ಯದ ಸುಮಾರು 80 ಪ್ರತಿಶತ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜಾನುವಾರುಗಳಿಗೆ ಮೇವು ಕೊರತೆ ಎದುರಾಗಿದೆ. ಅನೇಕ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗಿದ್ದು, ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಮತ್ತು ರೈತರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ರಾಜ್ಯ ಸರ್ಕಾರ ತಕ್ಷಣವೇ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ 3 ಲಕ್ಷ ರೂ. ವರೆಗೆ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಡೀಸೆಲ್ ದರ ಹೆಚ್ಚಳದಿಂದ ಕೃಷಿ ವೆಚ್ಚ ಮತ್ತಷ್ಟು ದುಬಾರಿಯಾಗಿದೆ. ಉಳುಮೆ, ಬಿತ್ತನೆ, ಕೊಯ್ಲು ಮತ್ತು ಸಾಗಾಣಿಕೆಗೆ ರೈತರು ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತಿದ್ದು, ಇದರ ಪರಿಣಾಮ ಸಾಲದ ಹೊರೆ ಹೆಚ್ಚಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ಸಿಗದೆ ಆರ್ಥಿಕವಾಗಿ ಕುಸಿಯುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ರಸಗೊಬ್ಬರಗಳ ಬೆಲೆಯನ್ನು ತಕ್ಷಣ ಇಳಿಸಬೇಕು ಅಥವಾ ರೈತರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಹೆಚ್ಚುವರಿ ಸಹಾಯಧನ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸಬೇಕು. ರೈತರು ಬೆಳೆದ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳಂತೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಗೊಬ್ಬರ ವಿತರಣೆಯಲ್ಲಿ ಕಡ್ಡಾಯ ಲಿಂಕ್ ಪದ್ಧತಿಗೆ ಕಡಿವಾಣ ಹಾಕಬೇಕು. ರೈತರಿಗೆ ಅಗತ್ಯವಿರುವ ಗೊಬ್ಬರದ ಜೊತೆಗೆ ಅನಗತ್ಯ ಕೀಟನಾಶಕ ಅಥವಾ ಇತರ ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಾಯಿಸುವ ಪದ್ಧತಿಯನ್ನು ನಿಲ್ಲಿಸಬೇಕು. ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕರೆಪ್ಪ ಕರಗೊಂಡ, ಮಂಜುಳಾ ಭಜಂತ್ರಿ, ಮಹಾದೇವಿ ಭಜಂತ್ರಿ, ರಮೇಶ್ ರಾಗಿ ಸೇರಿದಂತೆ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.