ಅಫಜಲಪುರ | ಪ್ರವಾಹ ಪೀಡಿತ ಸ್ಥಳಗಳಿಗೆ ಮುಖಂಡ ನಿತಿನ್ ಗುತ್ತೇದಾರ್ ಭೇಟಿ, ಶೀಘ್ರ ಪರಿಹಾರ ಘೋಷಣೆಗೆ ಆಗ್ರಹ
ಕಲಬುರಗಿ: ಅಫಜಲಪುರ ತಾಲೂಕಿನ ಬೋರಿ ಹಳ್ಳದ ತೀರದಲ್ಲಿರುವ ಜೇವರ್ಗಿ (ಕೆ), ಜೇವರ್ಗಿ (ಬಿ), ದಿಕ್ಸಂಗಾ ಗ್ರಾಮದ ವಿವಿಧ ಗ್ರಾಮಗಳಲ್ಲಿ ಪ್ರವಾಹದ ತೀವ್ರ ಹಾವಳಿಯಿಂದ ಮನೆಮಠ, ಜಮೀನು ಹಾಗೂ ಬೆಳೆಗಳು ಹಾನಿಗೊಳಗಾದ ಹಿನ್ನೆಲೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರು ಹಾಗೂ ನಾಗರಿಕರೊಂದಿಗೆ ಮಾತನಾಡಿ, ಅವರ ಸಂಕಷ್ಟವನ್ನು ಆಲಿಸಿದರು.
ಪ್ರವಾಹದಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ತತ್ತರಿಸುತ್ತಿರುವುದನ್ನು ಉಲ್ಲೇಖಿಸಿ, “ಇಂತಹ ಕಷ್ಟದ ಸಂದರ್ಭದಲ್ಲಿ ಸರ್ಕಾರವು ತಕ್ಷಣವೇ ಪೀಡಿತ ಕುಟುಂಬಗಳಿಗೆ ನೆರವಾಗಬೇಕು. ವಿಶೇಷವಾಗಿ ಜೀವನೋಪಾಯಕ್ಕೆ ಅವಲಂಬಿತರಾಗಿರುವ ರೈತರನ್ನು ಗಮನದಲ್ಲಿಟ್ಟುಕೊಂಡು ಎಕರೆಗೆ ಕನಿಷ್ಠ 25,000 ರೂ. ತುರ್ತು ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು" ಎಂದು ಆಗ್ರಹಿಸಿದರು.
ಸ್ಥಳೀಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವನಾಥ ರೇವೂರ್, ಚಂದು ಬಡದಾಳ, ಸಿದ್ದಾರಾಮ್ ಸಬದ್, ಶಿವಾನಂದ ತಳವಾರ್, ಬಸವರಾಜ ತಳಕೇರಿ ಸೇರಿದಂತೆ ಸ್ಥಳೀಯ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹಾಜರಿದ್ದರು.