ಅಫಜಲಪುರ | ಜ.1ರಂದು ರೇಣುಕಾ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ
ಗುರು ಚಾಂದಕವಟೆ
ಅಫಜಲಪುರ : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ನೆಪದಲ್ಲಿ ರೈತರನ್ನು ನಿರಂತರವಾಗಿ ವಂಚಿಸುತ್ತಿವೆ ಎಂದು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಗುರು ಚಾಂದಕವಟೆ ಹಾಗೂ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಸಂಚಾಲಕ ರಮೇಶ ಶೆಟ್ಟಿ ಆರೋಪಿಸಿದ್ದಾರೆ.
ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಅಕ್ರಮಗಳ ವಿರುದ್ಧ ಪ್ರತಿಭಟಿಸಲು ನಾಳೆ (ಜ.1) ರೇಣುಕಾ ಸಕ್ಕರೆ ಕಾರ್ಖಾನೆಯ ಮುಖ್ಯ ಗೇಟ್ ಬಂದ್ ಮಾಡಿ ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾರ್ಖಾನೆಗಳು ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡದೇ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದು, ಮತ್ತೊಂದೆಡೆ ಕಬ್ಬು ಕಟಾವು ಗ್ಯಾಂಗ್‌ಗಳ ಮೂಲಕ ಅಕ್ರಮ ಹಣ ವಸೂಲಿಗೆ ಕೈ ಹಾಕಿವೆ ಎಂದು ಆರೋಪಿಸಿದರು.
ಪ್ರಸ್ತುತ ಎಕರೆಗೆ 5,000 ರೂ. ರಿಂದ 10,000 ರೂ. ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು. ಒಂದು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ವಿಭಾಗಕ್ಕೆ ಸಂಬಂಧಿಸಿದ ಮ್ಯಾನೇಜರ್‌ಗಳನ್ನು ಒಳಗೊಂಡಂತೆ ಸಾಗಾಣಿಕೆ ಹಾಗೂ ಕಟಾವು ವಿಭಾಗದಲ್ಲಿ ಸುಮಾರು 70 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಬ್ಬು ನಾಟಿಯಿಂದ ಹಿಡಿದು ಸರ್ವೆ ಹಾಗೂ ಕೊನೆಗೆ ಕಟಾವು ಮಾಡುವವರೆಗೆ ಸಂಪೂರ್ಣ ಜವಾಬ್ದಾರಿ ಈ ವಿಭಾಗದ ಮೇಲಿದೆ. ಆದರೂ ಇಷ್ಟೊಂದು ಸಿಬ್ಬಂದಿ ಇದ್ದರೂ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಕಾರ್ಖಾನೆ ಆಡಳಿತ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಔಷಧಿ ಹಾಗೂ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿ ವೆಚ್ಚ ತೀವ್ರವಾಗಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆ ಸಿಬ್ಬಂದಿ ‘ಗಾಯದ ಮೇಲೆ ಬರೆ ಎಳೆದಂತೆ’ ರೈತರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹಿರಿಯತನದ ಆಧಾರದ ಮೇಲೆ ಕಬ್ಬು ಕಟಾವು ನಡೆಯದೆ ಇರುವುದರಿಂದ ಇಳುವರಿ ಕುಸಿಯುವ ಸಾಧ್ಯತೆ ಹೆಚ್ಚಿದ್ದು, 12 ತಿಂಗಳು ಕಬ್ಬು ಕಟಾವು ಆಗದೇ ಹೋದರೆ ಉತ್ಪಾದನೆಯಲ್ಲಿ ಭಾರೀ ಕುಂಠಿತ ಉಂಟಾಗಲಿದೆ. ಈ ಸ್ಥಿತಿಗೆ ಕಾರಣರಾದ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.