ಅಫಜಲಪುರ | ತಾಲೂಕು ಆಡಳಿತದ ವತಿಯಿಂದ ರಾಜ್ಯೋತ್ಸವ ಆಚರಣೆ
ಕಲಬುರಗಿ: ಅಫಜಲಪುರ ತಾಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಲ್ಲಿ ಆಚರಿಸಲಾಯಿತು.
ನಾಡ ದೇವಿಯ ಭವ್ಯವಾದ ಭಾವಚಿತ್ರವನ್ನು ವಿಶಾಲವಾದ ವಾಹನದಲ್ಲಿಟ್ಟು ಕನ್ನಡದ ಮಹಾನ್ ಕವಿ, ಲೇಖಕರು ಮತ್ತು ಸಮಾಜ ಸುಧಾರಕರ ವಿವಿಧ ಪೋಷಕಗಳನ್ನು ಧರಿಸಿದ ಶಾಲಾ ಮಕ್ಕಳಿಂದ ನಾಡದೇವಿಯ ಭಾವಚಿತ್ರದ ಮೆರವಣಿಗೆಯನ್ನು ಅಫಜಲಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರು ನಾಡ ದೇವಿಯ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.
ಗಡಿನಾಡ ಭಾಗವಾದ ಅಫಜಲಪುರ ಪಟ್ಟಣದಲ್ಲಿ ಪ್ರತಿಯೊಂದು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ಸರ್ವ ಸಿಬ್ಬಂದಿ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ ಸಂತಸವನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.
ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಕರ್ನಾಟಕಕ್ಕೆ ಸೇರಬೇಕಾದ ದಕ್ಷಿಣ ಸೋಲಾಪುರ ಮತ್ತು ಅಕ್ಕಲಕೋಟೆ ತಾಲೂಕುಗಳ ಕನ್ನಡಿಗರಿಗೆ ಕೂಡ ಇಂದು ಹಬ್ಬದ ವಾತಾವರಣ ಇದೆ. ನಮ್ಮಿಂದ ಹೊರಗಡೆ ಉಳಿದಿರುವ ಹೊರನಾಡು ಕನ್ನಡಿಗರಿಗೂ ಮತ್ತು ಒಳನಾಡಿನ ಕನ್ನಡಿಗರಿಗೂ ನಾಡದೇವಿಯ ಕರುಣೆಯಿಂದ ಸರ್ವ ಸೌಖ್ಯಗಳು ಲಭ್ಯವಾಗಲಿ, ಕನ್ನಡ ಅಜರಾಮರವಾಗಿರಲಿ ಎಂದು ಹೇಳಿದರು.
ತಹಶೀಲ್ದಾರ್ ಸಂಜೀವ್ ಕುಮಾರ್ ದಾಸರ್ ಅವರು ಕನ್ನಡ ಧ್ವಜವನ್ನು ತೋರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಫಜಲಪುರ ಪುರಸಭೆಯ ಅಧ್ಯಕ್ಷ ಸುಹಾಸಿನಿ ಕೇಳಗಿ, ಜೈ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸುರೇಶ್ ಅವಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ಧಾರ್ಥ ಬಸರಿಗಿಡ, ತಾಲೂಕು ಯುವ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಅಣವೀರಯ್ಯ ಮಠಪತಿ, ಪುರಸಭೆ ಸದಸ್ಯ ಸೈಫನ್ ಚಿಕ್ಕಳಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಂಜೀವ ಬಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ಗಾಡಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಮೆರವಣಿಗೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಲಂಕೃತ ಬಸ್ ಎಲ್ಲರ ಗಮನ ಸೆಳೆಯಿತು. ಅರಣ್ಯ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆಯ ನಡೆಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ನಾಗರಿಕರ ಮನಸ್ಸನ್ನು ಸೂರೆಗೊಂಡವು.