×
Ad

ಅಫಜಲಪುರ | ಸರಕಾರಿ ಯೋಜನೆಗಳ ಯಶಸ್ಸಿಗೆ ಗ್ರಾಮಸ್ಥರ ಒಗ್ಗಟ್ಟು ಅಗತ್ಯ: ಅರುಣಕುಮಾರ ಎಂ.ವೈ.ಪಾಟೀಲ್

ಶಿವಪುರ ಶಾಲೆಯ ನೂತನ ಕಟ್ಟಡ ಉದ್ಘಾಟನೆ

Update: 2026-02-03 23:02 IST

ಅಫಜಲಪುರ : ಸರ್ಕಾರದ ಯಾವುದೇ ಒಂದು ಯೋಜನೆ ಗ್ರಾಮಕ್ಕೆ ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಾಮಸ್ಥರು ಒಗ್ಗಟ್ಟಾಗಿ ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸ ಪಡೆದುಕೊಂಡಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗುತ್ತವೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಹೇಳಿದರು.

ತಾಲೂಕಿನ ಶಿವಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2021–22ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 40 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಪುರ ಗ್ರಾಮದ ಶಾಲಾ ಕಟ್ಟಡವು ಬಹಳ ದಿನಗಳಿಂದ ಉದ್ಘಾಟನೆಯಾಗಿರಲಿಲ್ಲ. ಹಳೆಯ ಕಟ್ಟಡದಲ್ಲಿ ಮಕ್ಕಳಿಗೆ ಸೂಕ್ತ ಕಲಿಕಾ ವಾತಾವರಣವೂ ಇರಲಿಲ್ಲ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಮೂರು ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ನಾಲ್ಕು ಹೊಸ ಶಾಲಾ ಕೊಠಡಿಗಳಿಗೆ ಮಂಜೂರಾತಿ ದೊರೆತಿದ್ದು, ಅವುಗಳ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದರು. ಶಾಲೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳ ಪಟ್ಟಿ ನೀಡಿದಲ್ಲಿ, ಆದ್ಯತೆಯ ಮೇರೆಗೆ ಅವುಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ದೇಸಾಯಿ ಕಲ್ಲೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ ಸಿಂದಗೇರಿ, ಸಿದ್ದಪ್ಪ ದೊಡ್ಮನಿ, ಗುರುಪಾದಗೌಡ ಪಾಟೀಲ್, ಪ್ರಭು ಜಮಾದಾರ, ಹಣಮಂತ ವಾಲಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲಾ ಕಟ್ಟಡ ಹಾಗೂ ರಸ್ತೆ ನಿರ್ಮಾಣ ಕಾರ್ಯಗಳಿಗೆ ಅಕ್ಕಪಕ್ಕದ ಹೊಲಗಳ ಮಾಲಕರು ಅಡೆತಡೆ ಮಾಡಬಾರದು. ಅಡ್ಡಿಪಡಿಸುವುದರಿಂದ ಅಭಿವೃದ್ಧಿಗೆ ಪೆಟ್ಟು ಬೀಳುತ್ತದೆ. ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು ನಿರಂತರ ಶ್ರಮವಹಿಸಿ ಸರ್ಕಾರದಿಂದ ಅಭಿವೃದ್ಧಿ ಅನುದಾನ ತರಿಸುತ್ತಿದ್ದಾರೆ.

-ಪ್ರಕಾಶ್ ಜಮಾದಾರ ( ಅಧ್ಯಕ್ಷರು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಫಜಲಪುರ)


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News