ಕಲಬುರಗಿ | ಶೋಷಿತರ ಪರವಿರುವ ಯುಜಿಸಿ ಕಾಯ್ದೆ ಜಾರಿ ಮಾಡಿ : ಅರ್ಜುನ್ ಭದ್ರೆ ಆಗ್ರಹ
ಕಲಬುರಗಿ : ಶೋಷಿತ ವರ್ಗಗಳ ವಿದ್ಯಾರ್ಥಿಗಳ ರಕ್ಷಣೆಗೆ ತರಲಾಗಿರುವ ಯುಜಿಸಿ ಹೊಸ ಕಾಯ್ದೆಯನ್ನು ಯಾವುದೇ ವಿಳಂಬವಿಲ್ಲದೆ ದೇಶಾದ್ಯಂತ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಆಗ್ರಹಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ, ಅವಮಾನ ಹಾಗೂ ಮಾನಸಿಕ ಹಿಂಸೆ ತಡೆಯಲು ಯುಜಿಸಿ ಹೊಸ ಕಾಯ್ದೆ ರೂಪಿಸಿರುವುದು ಸ್ವಾಗತಾರ್ಹ ಎಂದರು. ಆದರೆ ಈ ಕಾಯ್ದೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ತಕ್ಷಣವೇ ತಡೆಯಾಜ್ಞೆ ತೆರವುಗೊಳಿಸಿ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
2016ರಲ್ಲಿ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಹಾಗೂ 2019ರಲ್ಲಿ ಮುಂಬೈನ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಯಲ್ ಜಾತಿ ಭೇದದ ಅವಮಾನದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದೇಶದ ಮನಸ್ಸನ್ನು ಕಲುಷಿತಗೊಳಿಸಿದ್ದವು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಯುಜಿಸಿ ಹೊಸ ನಿಯಮಗಳು ಅತ್ಯಂತ ಅಗತ್ಯವಾಗಿವೆ ಎಂದರು.
ಯುಜಿಸಿಯ ಹೊಸ ಕಾಯ್ದೆಯಡಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಮಾನ ಅವಕಾಶ ಕೇಂದ್ರ (EOC) ಸ್ಥಾಪನೆ ಮಾಡಿ, ಅದರಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಮಹಿಳೆ ಹಾಗೂ ಅಂಗವಿಕಲರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಶೋಷಿತ ಸಮುದಾಯದ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ತಾರತಮ್ಯ ನಡೆದರೆ, ಈ ಕೇಂದ್ರವು ವರದಿ ಸಲ್ಲಿಸಲಿದೆ. ಅದರ ಆಧಾರದಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳು ಅಥವಾ ಬೋಧಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಮೇಲ್ವರ್ಗದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿರುವುದನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದ ಅವರು, ಯುಜಿಸಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಶಕ್ತಿಗಳ ಹಿಂದೆ ಕೇಂದ್ರ ಸರ್ಕಾರ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಿತೂರಿಯಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಫೆ.8ರಂದು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಹೇಶ್ ಕೋಕಿಲೆ, ಸೂರ್ಯಕಾಂತ ಆಜಾದಪುರ, ಸುಭಾಷ್ ಕಲ್ಮೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.