ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅನಿರೀಕ್ಷಿತ ತಪಾಸಣೆ : 3 ಸ್ಮಾರ್ಟ್ ಫೋನ್, 2 ಏರ್‌ಬಡ್ಸ್ ಪತ್ತೆ
Update: 2026-02-03 20:57 IST
ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಡೆಸಿದ ಅನಿರೀಕ್ಷಿತ ತಪಾಸಣೆ ವೇಳೆ 3 ಸ್ಮಾರ್ಟ್ ಫೋನ್‌ಗಳು ಹಾಗೂ 2 ಏರ್‌ಬಡ್ಸ್ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಜೈಲಿನ ವಿಚಾರಣಾಧೀನ ಕೈದಿಗಳಾದ ಶ್ರೀನಿವಾಸ ಗಣೇಶ್, ಪ್ರದೀಪ್ ಅಲಿಯಾಸ್ ದಾಸರಹಳ್ಳಿ ಪ್ರದೀಪ್ ಹಾಗೂ ದಿನೇಶ್ ಅಲಿಯಾಸ್ ಡಿಯೋ ದಿನಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೈಲಿನ ವಾರ್ಡನ್ ಬಸವರಾಜ, ಅಧೀಕ್ಷಕ ರಾಕೇಶ್ ಸೇರಿದಂತೆ 42 ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕಳೆದ ಜ.28ರಂದು ಬ್ಯಾರಕ್ ಸಂಖ್ಯೆ 11ರಿಂದ 13ರವರೆಗೆ ಅನಿರೀಕ್ಷಿತ ತಪಾಸಣೆ ನಡೆಸಿದ ವೇಳೆ, ಈ ಮೂವರು ಕೈದಿಗಳು ಜೈಲಿನ ಶೌಚಾಲಯದಲ್ಲಿ ಸ್ಮಾರ್ಟ್ ಫೋನ್ ಮತ್ತು ಏರ್‌ಬಡ್ಸ್‌ಗಳನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ.
ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.