ಕಲಬುರಗಿ | ʼರಾಷ್ಟ್ರಕೂಟʼ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿ: ಮಹಿಪಾಲರೆಡ್ಡಿ
ಕಲಬುರಗಿ : ಕನ್ನಡದ ಮೊದಲ ಲಾಕ್ಷಣಿಕ ಗ್ರಂಥ ‘ಕವಿರಾಜಮಾರ್ಗ’ ನೀಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ದಿಕ್ಕು ತೋರಿದ ನೃಪತುಂಗ ಅಮೋಘವರ್ಷರ ಆಡಳಿತದ ‘ರಾಷ್ಟ್ರಕೂಟ’ ವಂಶದ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನವನ್ನು ಸ್ಥಾಪಿಸಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತ, ನಟ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸೇಡಂ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಕನ್ನಡಕ್ಕೆ ಅಪಾರ ಕೀರ್ತಿ ತಂದುಕೊಟ್ಟ ಶ್ರೀವಿಜಯನ ‘ಕವಿರಾಜಮಾರ್ಗ’ ಕೃತಿಯು ಕನ್ನಡ ಸಾಹಿತ್ಯ ಹಾಗೂ ಇತಿಹಾಸ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ಹೇಳಿದ್ದಾರೆ.
ಕನ್ನಡವನ್ನು ವಿಶ್ವಮಾನ್ಯತೆಯ ಹಂತಕ್ಕೆ ತಲುಪಿಸುವಲ್ಲಿ ಈ ಗ್ರಂಥದ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ, ರಾಷ್ಟ್ರಕೂಟ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸುವುದು ಕನ್ನಡದ ಸಾರಸ್ವತ ಲೋಕಕ್ಕೆ ದೊಡ್ಡ ಉತ್ತೇಜನವಾಗಲಿದೆ ಎಂದು ತಿಳಿಸಿದ್ದಾರೆ.
ಕಾವ್ಯ ಕ್ಷೇತ್ರಕ್ಕೆ ‘ರಾಜಮಾರ್ಗ’ವನ್ನು ನಿರ್ಮಿಸಿದ ರಾಷ್ಟ್ರಕೂಟರ ಹೆಸರಿನಲ್ಲಿ ಸರ್ಕಾರ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಸಾಹಿತ್ಯ, ಸಂಶೋಧನೆ, ಇತಿಹಾಸ ಅಧ್ಯಯನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ, ಕನ್ನಡ ಸಾಹಿತ್ಯದ ಮೊದಲ ಲಾಕ್ಷಣಿಕ ಗ್ರಂಥ ಎಂಬ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ‘ರಾಷ್ಟ್ರಕೂಟ’ ಹೆಸರಿನಲ್ಲಿ ಸಾಹಿತ್ಯ–ಇತಿಹಾಸ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ರಾಷ್ಟ್ರಕೂಟರ ಆಡಳಿತ ಕಾಲದ ರಾಜಧಾನಿಯಾಗಿದ್ದ ಮಳಖೇಡ (ಮಾನ್ಯಖೇಟ)ವನ್ನು ವಿಶ್ವಮಾನ್ಯತೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರವನ್ನು ಕೋರಿದ್ದಾರೆ.