Aland | ಮಾನಸಿಕ ನೆಮ್ಮದಿಗಾಗಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಬಿ.ಎಚ್.ನಿರಗುಡಿ
‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಕಾರ್ಯಕ್ರಮ
ಆಳಂದ: ಒತ್ತಡದ ಜೀವನಶೈಲಿಯ ನಡುವೆಯೂ ಮಾನಸಿಕ ನೆಮ್ಮದಿ, ಸಂತೋಷ ಹಾಗೂ ಹೊಸ ಜ್ಞಾನಾನುಭವ ಪಡೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಹೇಳಿದರು.
ಪಟ್ಟಣದ ಬಾಬುರಾವ ಮಡ್ಡೆ ಅವರ ಮನೆಯಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ, ಸತ್ಕರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಲು ಕನ್ನಡ ಶಾಲೆಗಳ ಜತೆಗೆ ಕನ್ನಡ ಪುಸ್ತಕಗಳು, ಪತ್ರಿಕೆಗಳು ಹಾಗೂ ಸಂಸ್ಕೃತಿಯನ್ನೂ ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ. ಮನೆಯಲ್ಲಿ ಪುಸ್ತಕಗಳಿದ್ದರೆ ಮನೆಯ ಸೌಂದರ್ಯ ಹೆಚ್ಚುವುದರ ಜತೆಗೆ ವ್ಯಕ್ತಿತ್ವಕ್ಕೂ ಮೆರುಗು ಬರುತ್ತದೆ ಎಂದು ಹೇಳಿದರು.
ಉಪನ್ಯಾಸಕ ಶ್ರೀಶೈಲ ಮಾಳಗೆ ಮಾತನಾಡಿ, ಶಿವಾಜಿ ಮಹಾರಾಜರು, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಸಾಧಕರ ಬದುಕಿನ ಮೇಲೆ ಪುಸ್ತಕಗಳು ಪ್ರಭಾವ ಬೀರಿವೆ. ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್‌ಗಳಿಂದ ದೂರವಿಟ್ಟು, ಓದುವ ಹವ್ಯಾಸ ಬೆಳೆಸಲು ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ ಸನ್ಮುಖ, ಪ್ರಭಾಕರ ಸಲಗರೆ, ಅಪ್ಪಾಸಾಹೇಬ ತೀರ್ಥ, ಪೂಜಾ ಲೋಹಾರ, ಎಲ್.ಎಸ್. ಬೀದಿ, ಮಹಾದೇವ ಹತ್ತಿ, ರಾಜಶೇಖರ ಹರಿಹರ, ಸಂಜಯ ಪಾಟೀಲ, ಮಲ್ಲಿನಾಥ ತುಕಾಣೆ, ರಾಜಶೇಖರ ಕಡಗನ, ಶಿವಲಿಂಗ ತೇಲ್ಕರ್, ಶಾಂತಪ್ಪ ಕೊರೆ, ಎಸ್.ಬಿ. ಪಾಟೀಲ, ಡಿ.ಎಂ. ಪಾಟೀಲ, ರಮೇಶ ಮಾಡಿಯಾಳಕರ್, ವಿಜಯಕುಮಾರ ಬಿರಾದಾರ, ಮೊನಪ್ಪ ಸುತಾರ ಹಾಗೂ ಸಿದ್ದಾರ್ಥ ಹಸೂರೆ ಅವರ ಮನೆಗಳಲ್ಲಿನ ಪುಸ್ತಕ ಸಂಗ್ರಹವನ್ನು ವೀಕ್ಷಿಸಲಾಯಿತು. ಬಳಿಕ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ರೇವಣಸಿದ್ದಪ್ಪ ಚಂದನಕೇರಾ ನಿರೂಪಿಸಿದರು. ಶರಣಪ್ಪ ಮನಗೂಳಿ ವಂದಿಸಿದರು.