Kalaburagi | ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಕಲಬುರಗಿ : ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ (ಈ.ಡಿ.), ಆದಾಯ ತೆರಿಗೆ ಇಲಾಖೆ (ಐ.ಟಿ.) ಹಾಗೂ ಸಿಬಿಐನಂತಹ ಸಂಸ್ಥೆಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ವತಿಯಿಂದ ಸೋಮವಾರ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಬಸವರಾಜ ಟಿ. ಬಾಡಿಹಾಳ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕೇಂದ್ರ ಸರ್ಕಾರವು ಕಳೆದ 12 ವರ್ಷಗಳಿಂದ ಬಿಜೆಪಿ ಹೊರತಾದ ವಿರೋಧ ಪಕ್ಷಗಳ ಜನಪ್ರತಿನಿಧಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಒತ್ತಡ ಹೇರುತ್ತಿದೆ ಎಂದು ಆರೋಪಿಸಲಾಯಿತು.
ಇಂತಹ ಕ್ರಮಗಳ ಮೂಲಕ ವಿರೋಧ ಪಕ್ಷಗಳ ನಾಯಕರನ್ನು ಭಯಭೀತಗೊಳಿಸಿ, ವಿವಿಧ ರಾಜ್ಯಗಳ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇತ್ತೀಚೆಗೆ ಕರ್ನಾಟಕದ ದಲಿತ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ನಡೆದ ಇ.ಡಿ. ದಾಳಿಗಳು ರಾಜಕೀಯ ಪ್ರೇರಿತ ಕ್ರಮಗಳಿಗೆ ಉದಾಹರಣೆಯಾಗಿವೆ ಎಂದು ಸಮಿತಿ ಆರೋಪಿಸಿತು. ಪ್ರಜಾಪ್ರಭುತ್ವದ ಮೌಲ್ಯಗಳು, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಸರ್ಕಾರದ ಪಾರದರ್ಶಕತೆಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಸಮಿತಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕರಾದ ಶಿವಯೋಗಿ ಇನಾಮದಾರ, ಕಬೀರದಾಸ ಹರಸೂರಕರ್, ದುರ್ಗಪ್ಪ ಕೊಲ್ಲೋಳಿ, ರಾಹುಲ್ ಹಂಚಾಟೆ, ಬಸವರಾಜ ನಾಟಿಕರ್, ಮೈಬೂಬ ಆಲಿ, ರಾಜಕುಮಾರ, ದೇವೇಂದ್ರ ಎಚ್. ಯಕ್ಕಂಚಿ, ಮೈಲೂಬ ಸಾಹೇಬ, ವಿಜಯಲ್ ಕಾಂಬಳೆ, ಸುಹಾಸಿನಿ ಕೊಳ್ಳುರ, ನಾಗಮ್ಮ ಕೊಡೆಕಲ್, ನಿಂಗಮ್ಮ ಮಾವನೂರ, ಮಹಮ್ಮದ್ ಜುನೈದಿ, ಎಂ.ಡಿ. ಸಹರ ಅಲಿ ಸೇರಿದಂತೆ ವಿವಿಧ ತಾಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.