ಕಲಬುರಗಿ: ಮಾಸಿಕ 15 ಸಾವಿರ ರೂ. ಗೌರವಧನ ನಿಗದಿಪಡಿಸಬೇಕು, ಬಾಕಿ ಇರುವ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವವರೆಗೆ ‘ಸಮಸ್ತ’ ಆ್ಯಪ್‌ನಲ್ಲಿ ಕೆಲಸ ಮಾಡಲು ಒತ್ತಾಯಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಗುಣಮಟ್ಟದ ಮೊಬೈಲ್‌ಗಳನ್ನು ಒದಗಿಸಬೇಕು, ಆ್ಯಪ್ ಬಳಕೆಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಹೆಚ್ಚುವರಿ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಾಸಿಕ ಗೌರವಧನ ಮತ್ತು ಪ್ರೋತ್ಸಾಹಧನವನ್ನು ಯಾವುದೇ ಕಡಿತವಿಲ್ಲದೆ ನಿಯಮಿತವಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.

‘ನಿಕ್ಷಯ್’ ಆ್ಯಪ್‌ನಲ್ಲಿ ಕೆಲಸ ಮಾಡಲು ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಕೆಲಸ ತೊರೆದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯ ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿ.ಜಿ. ದೇಸಾಯಿ, ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ನಂದೂರ, ಗೀತಾ ಬಡಿಗೇರ, ಎಸ್.ಎಂ. ಶರ್ಮಾ, ತಾಯಮ್ಮ ನರಿಬೋಳ, ಸಂಗೀತಾ ನಾಯ್ಕೋಡಿ, ಭಾಗ್ಯಜ್ಯೋತಿ, ಯಲ್ಲಮ್ಮ ಚಿತ್ತಾಪುರ, ಲಕ್ಷ್ಮೀ ಜೀರಟಗಿ ಸೇರಿದಂತೆ ಹಲವು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor