ಕಲಬುರಗಿ : ದೇಶದ ಪ್ರತಿಷ್ಠಿತ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿಯ 2026–27ನೇ ಸಾಲಿನ 92ನೇ ಆವೃತ್ತಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಅವಕಾಶ ಕಲಬುರಗಿಯ ಯುವ ಕ್ರಿಕೆಟ್ ಪ್ರತಿಭೆ ಮಾಧವ್ ಬಜಾಜ್ ಅವರಿಗೆ ಲಭಿಸಿದೆ. ನಗರದ ಬಟ್ಟೆ ವ್ಯಾಪಾರಿ ಪ್ರಕಾಶ್ ಬಜಾಜ್ ಅವರ ಪುತ್ರನಾಗಿರುವ ಮಾಧವ್ ಅವರ ಈ ಸಾಧನೆಯಿಂದ ಕಲಬುರಗಿ ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮನೆಮಾಡಿದೆ.

ನಗರದ ಚಂದ್ರಕಾಂತ ಪಾಟೀಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಮಾಧವ್, ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ನಗರದ ಎನ್.ವಿ. ಮೈದಾನದಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ಅಭ್ಯಾಸ ಮಾಡುವ ಮೂಲಕ ಕ್ರಿಕೆಟ್‌ನಲ್ಲಿ ತಮ್ಮದೇ ಆದ ನೆಲೆ ಕಂಡುಕೊಳ್ಳಲು ಶ್ರಮಿಸಿದರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳಿದ ಅವರು, ಯಲಹಂಕದಲ್ಲಿ ಪಿಯುಸಿ ಹಾಗೂ ಬಿಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಕಳೆದ 11 ವರ್ಷಗಳಿಂದ ಬೆಂಗಳೂರಿನ ಸೆಂಚೂರಿಯನ್ ಕ್ಲಬ್ ಪರವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ ಮಾಧವ್, ಸತತ ಪರಿಶ್ರಮ, ಶಿಸ್ತು ಹಾಗೂ ಆಟದ ಮೇಲಿನ ಬದ್ಧತೆಯಿಂದ ತಮ್ಮ ಕೌಶಲವನ್ನು ವೃದ್ಧಿಸಿಕೊಂಡಿದ್ದಾರೆ. ಇದೀಗ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ತಮ್ಮ ಕ್ರಿಕೆಟ್ ಬದುಕಿನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

ರಣಜಿ ತಂಡಕ್ಕೆ ಆಯ್ಕೆಯಾಗುವ ಮೊದಲೇ ಮಾಧವ್ ಮೂರು ಬಾರಿ ಮಹಾರಾಜ ಟ್ರೋಫಿಯಲ್ಲಿ ಹಾಗೂ ಕಲಬುರಗಿಯಲ್ಲಿ ನಡೆದ ಕೆಬಿಎನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಭಾಗವಹಿಸಿದ್ದರು. ಕಲಬುರಗಿ ನಗರದ ಮೈದಾನದಲ್ಲಿ ಆರಂಭವಾದ ಅವರ ಕ್ರಿಕೆಟ್ ಅಭ್ಯಾಸ ಬೆಂಗಳೂರಿನ ಪ್ರತಿಷ್ಠಿತ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಬೆಳೆದು, ಇದೀಗ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ಹಂತಕ್ಕೆ ತಲುಪಿದೆ. ಮಾಧವ್ ಬಜಾಜ್ ಅವರ ಈ ಸಾಧನೆ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor