×
Ad

ಆಳಂದ: ಭಾರೀ ಮಳೆಯಿಂದಾಗಿ ಬೆಳೆ, ಮನೆ, ರಸ್ತೆ ಹಾನಿ; ಜನಜೀವನ ಅಸ್ತವ್ಯಸ್ತ

Update: 2025-09-28 21:22 IST

ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶನಿವಾರವೂ ಮಳೆ ಮುಂದುವರಿದ ಪರಿಣಾಮ ಆಳಂದ ತಾಲೂಕಿನ 35 ಕೆರೆಗಳು, ಅಮರ್ಜಾ ಅಣೆಕಟ್ಟು, ಗೋಕಟ್ಟೆ, ಬಾವಿ ಹಾಗೂ ಹಳ್ಳ-ಕೊಳ್ಳ-ನಾಲಾಗಳು ತುಂಬಿ ಹರಿಯತೊಡಗಿದ್ದು, ನೂರಾರು ಎಕರೆ ಜಮೀನುಗಳು ಜಲಾವೃತಗೊಂಡು ಬಿತ್ತನೆಯಾದ ಬೆಳೆ ಹಾಳಾಗಿವೆ. 

ಇದೇ ವೇಳೆ ಎರಡು ದಿನಗಳಲ್ಲಿ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಕಿಣ್ಣಿ ಸುಲ್ತಾನ ಗ್ರಾಮದಲ್ಲಿ 10 ಮನೆಗಳಿಗೆ ನೀರು ನುಗ್ಗಿ ಆಹಾರ ಸಾಮಗ್ರಿಗಳು ಹಾನಿಯಾಗಿದ್ದು, ಎರಡು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಕೊರಳ್ಳಿ ಗ್ರಾಮದಲ್ಲಿ 7 ಮನೆಗಳಲ್ಲಿ ನೀರು ನುಗ್ಗಿದ್ದು, ಆಹಾರ ಮತ್ತು ವಸ್ತುಸಾಮಗ್ರಿ ಹಾನಿಗೊಳಗಾಗಿವೆ. ಒಟ್ಟಾರೆ 18 ಮನೆಗಳು ಜಲಾವೃತಗೊಂಡು ಕುಟುಂಬಗಳು ನಿರಾಶ್ರಿತರಾಗಿವೆ.

ರಸ್ತೆಗಳ ದುಸ್ಥಿತಿಯಿಂದ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ. ಬೋಧನ-ಕಮಲಾನಗರ ರಸ್ತೆಯ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ. ಶಿರೂರ ಜಿ ಗ್ರಾಮದ ಸೇತುವೆ ಮೇಲಿಂದ ನೀರಿನ ಪ್ರವಾಹ ಹರಿದು ಸಂಚಾರ ಸ್ಥಗಿತಗೊಂಡಿದೆ. ಆಳಂದ ಪಟ್ಟಣದ ಹೊರವಲಯದ ತಡಕಲ್ ರಸ್ತೆಯ ದಭದಭಿ ಹಾಗೂ ಡಿಗ್ರಿ ಕಾಲೇಜು, ತೀರ್ಥ-ಸಾಲೇಗಾಂವ ಹಳ್ಳಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ವ್ಯಾಪಾರ-ವೈಹಿವಾಟು ಸ್ಥಗಿತಗೊಂಡಿದ್ದು, ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಸ್ಥಳೀಯರು ಹಸಿ ಬರ ಘೋಷಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಮೂಲಕ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News