×
Ad

ಆಳಂದ | ರಸ್ತೆ ಕಾಮಗಾರಿಗೆ ವಿರೋಧವಲ್ಲ, ರೈತರ ಹಿತಕ್ಕಾಗಿ ಆಕ್ಷೇಪ : ಮಹೇಶ್ವರಿ ವಾಲಿ

Update: 2026-07-11 19:33 IST

ಆಳಂದ : ಶುಕ್ರವಾಡಿ–ಹೊನ್ನಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಕಲಬುರಗಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರವಾಗಿ ಖಂಡಿಸಿದ್ದಾರೆ.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ನಿರ್ಮಾಣಕ್ಕೆ ತಾವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಸರ್ಕಾರ ಅನುಮೋದಿಸಿರುವ ನಕ್ಷೆ ಹಾಗೂ ನಿಯಮಾವಳಿಯಂತೆ ಕಾಮಗಾರಿ ನಡೆಯಬೇಕು ಮತ್ತು ರೈತರ ಜಮೀನಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಸ್ಪಷ್ಟಪಡಿಸಿದರು.

ರಸ್ತೆ ಕಾಮಗಾರಿಯನ್ನು ಸರ್ಕಾರಿ ನಕ್ಷೆಯಲ್ಲಿ ನಮೂದಿಸಿರುವ ಮಾರ್ಗದಲ್ಲಿಯೇ ಕೈಗೊಳ್ಳಬೇಕು ಎಂದು ಆರಂಭದಿಂದಲೇ ಒತ್ತಾಯಿಸಿದ್ದೇವೆ. ಆದರೆ ನಕ್ಷೆಯಲ್ಲಿಲ್ಲದ ರೈತರ ಕೃಷಿ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನ ನಡೆದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಬಳಿದು ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಶಾಸಕರ ಬೆಂಬಲಿಗರು ಹಾಗೂ ಕೆಲ ಗ್ರಾಮಸ್ಥರನ್ನು ಮುಂದಿಟ್ಟು, “ಮಹೇಶ್ವರಿ ವಾಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ” ಎಂಬ ಆರೋಪ ಮಾಡಿರುವುದನ್ನು ತಳ್ಳಿಹಾಕಿದ ಅವರು, ಅಭಿವೃದ್ಧಿಗೆ ವಿರೋಧವಲ್ಲ; ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಹಕ್ಕುಗಳಿಗೆ ಧಕ್ಕೆಯಾಗುವುದನ್ನು ಪ್ರಶ್ನಿಸಿದ್ದೇವೆ ಎಂದು ಹೇಳಿದರು.

ಈ ಹಿಂದೆ ರೈತರ ಜಮೀನಿನ ಸ್ಥಳಕ್ಕೆ ಭೇಟಿ ನೀಡಿ, ಶುಕ್ರವಾಡಿ–ಹೊನ್ನಳ್ಳಿ ಗ್ರಾಮಕ್ಕೆ ಉತ್ತಮ ರಸ್ತೆ ನಿರ್ಮಾಣವಾಗಬೇಕು ಎಂಬುದು ನಮ್ಮ ಬೇಡಿಕೆಯೂ ಆಗಿದೆ. ಆದರೆ ರೈತರ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಕೈಗೊಳ್ಳದೆ, ಸರ್ಕಾರದ ಅನುಮೋದಿತ ನಕ್ಷೆ ಹಾಗೂ ಕಾನೂನುಬದ್ಧ ನಿಯಮಾವಳಿಯಂತೆ ಕಾಮಗಾರಿ ನಡೆಸುವಂತೆ ತಾಲ್ಲೂಕು ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ಮಹೇಶ್ವರಿ ವಾಲಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News