×
Ad

Kalaburagi | ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 188 ಪ್ರಕರಣ ಇತ್ಯರ್ಥ

ರಾಜೀ ಸಂಧಾನದ ಮೂಲಕ 6.04 ಕೋಟಿ ರೂ. ಗೂ ಅಧಿಕ ಪರಿಹಾರ ವಿತರಣೆ

Update: 2026-07-11 19:06 IST

ಕಲಬುರಗಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕಲಬುರಗಿಯ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 188 ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದ್ದು, 6.04 ಕೋಟಿ ರೂ. ಗೂ ಅಧಿಕ ಪರಿಹಾರ ಮೊತ್ತವನ್ನು ಸಂತ್ರಸ್ತರು ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ.

ಈ ಕುರಿತು ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಕುಮಾರ್ ಬಿ.ಆರ್. ಪ್ರಕಟಣೆ ನೀಡಿ, ಲೋಕ್ ಅದಾಲತ್‌ನಲ್ಲಿ ಒಟ್ಟು 188 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, 6,04,47,920 ರೂ. ಪರಿಹಾರ ಮೊತ್ತ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಲೋಕ್ ಅದಾಲತ್‌ನ ಯಶಸ್ವಿ ನಿರ್ವಹಣೆಗಾಗಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಶೇಷ ಸಂಧಾನ ಪೀಠಗಳನ್ನು ರಚಿಸಲಾಗಿತ್ತು. ನ್ಯಾಯಮೂರ್ತಿಗಳಾದ ಕೆ.ಎನ್. ಕೇಶವನಾರಾಯಣ ಹಾಗೂ ಬಿ.ಎನ್. ಬಜಂತ್ರಿ ಅವರ ನೇತೃತ್ವದಲ್ಲಿ ನಡೆದ ಸಂಧಾನ ಪ್ರಕ್ರಿಯೆಯಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಸಿವಿಲ್, ಕ್ರಿಮಿನಲ್ ಸೇರಿದಂತೆ ವಿವಿಧ ಸ್ವರೂಪದ ಪ್ರಕರಣಗಳನ್ನು ಉಭಯ ಪಕ್ಷಗಳ ಸಮ್ಮತಿಯೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಲಾಯಿತು.

ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದರೊಂದಿಗೆ ನ್ಯಾಯಾಲಯಗಳ ಮೇಲಿನ ವ್ಯಾಜ್ಯಗಳ ಒತ್ತಡ ಕಡಿಮೆಯಾಗಿದ್ದು, ಸಾರ್ವಜನಿಕರು ಹಾಗೂ ಪಕ್ಷಕಾರರು ಈ ಪರ್ಯಾಯ ನ್ಯಾಯ ವ್ಯವಸ್ಥೆಯ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಸದುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾರ್ಯದರ್ಶಿ ಕುಮಾರ್ ಬಿ.ಆರ್. ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News