ಕಾಳಗಿ | ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜು.13ರಂದು ರೈತರಿಂದ ಪ್ರತಿಭಟನೆ
ಕಾಳಗಿ : ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 13ರಂದು ಕಾಳಗಿ ಪಟ್ಟಣದಲ್ಲಿ ಬೃಹತ್ ರೈತ ಪ್ರತಿಭಟನೆ ಹಾಗೂ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮರ್ಪಕ ಮಳೆಯ ಕೊರತೆಯಿಂದ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರ್ಕಾರ ಶೀಘ್ರವೇ ರೈತರ ನೆರವಿಗೆ ಧಾವಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಮಠಾಧೀಶರು ಹಾಗೂ ನೂರಾರು ರೈತರ ನೇತೃತ್ವದಲ್ಲಿ ಎತ್ತಿನ ಬಂಡಿ, ಟ್ರಾಕ್ಟರ್ ಹಾಗೂ ಹಲಗೆಗಳೊಂದಿಗೆ ಪಟ್ಟಣದ ಮುಖ್ಯಬಜಾರ್‌ನ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಲಾಗುವುದು ಎಂದು ತಿಳಿಸಿದರು.
ತಾಲೂಕಿನ ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ವೀರಣ್ಣ ಗಂಗಾಣಿ ಕರೆ ನೀಡಿದರು.
ಈ ಸಂದರ್ಭದಲ್ಲಿ ರಟಕಲ್ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಗೌರಿಗುಡ್ಡದ ಸಿದ್ಧಶಿವಯೋಗಿಗಳು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ಹೋರಾಟಗಾರ ಮೋಹನ ಚಿನ್ನ, ಸುಂದರ ಸಾಗರ, ಕರಣ ರಾಜಾಪೂರ, ಪವನ ಚಿನ್ನ, ಅವಿನಾಶ್ ಗುತ್ತೇದಾರ, ಮಲ್ಲಿಕಾರ್ಜುನ ಪಾಟೀಲ, ಶಿವು ಸಾಲಿಮಠ, ರಮೇಶ ಹೆಬ್ಬಾಳ, ಜಗನ್ನಾಥ ಸೇರಿದಂತೆ ಅನೇಕರು ಇದ್ದರು.