Kalaburagi | ದಂಡೋಟಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ : ಕಠಿಣ ಕ್ರಮಕ್ಕೆ ಡಾ.ಸುಧಾ ಹಾಲಕಾಯಿ ಆಗ್ರಹ
ಕಲಬುರಗಿ : ಚಿತ್ತಾಪುರ ತಾಲೂಕಿನ ದಂಡೋಟಿ ವಿದ್ಯಾರ್ಥಿ ನಿಲಯದಲ್ಲಿ ನಡೆದ ಆಹಾರ ವಿಷಬಾಧೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ವಕ್ತಾರೆ ಡಾ. ಸುಧಾ ಹಾಲಕಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯಂತಹ ಗಂಭೀರ ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದ್ದಾರೆ.
“ಎಷ್ಟು ವಿದ್ಯಾರ್ಥಿಗಳಿಗೆ ಆಹಾರ ವಿಷಬಾಧೆಯಾಗಿದೆ ಎಂಬುದಕ್ಕಿಂತ, ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣವಾದ ಅಂಶಗಳನ್ನು ಪತ್ತೆಹಚ್ಚುವುದು ಮುಖ್ಯವಾಗಿದೆ. ಆಹಾರದ ಗುಣಮಟ್ಟ, ಸುರಕ್ಷತಾ ಕ್ರಮಗಳು ಹಾಗೂ ಸಂಬಂಧಿತ ವ್ಯವಸ್ಥೆಗಳ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳಬಾರದು” ಎಂದು ಒತ್ತಾಯಿಸಿದ್ದಾರೆ.
ಈ ಘಟನೆ ಕೇವಲ ಒಂದು ಪ್ರತ್ಯೇಕ ಪ್ರಕರಣವಲ್ಲ, ಜಿಲ್ಲೆಯ ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ಆತಂಕವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿರುವ ಅವರು, ಶುದ್ಧ ಕುಡಿಯುವ ನೀರು, ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರದ ಗುಣಮಟ್ಟ, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಜಿಲ್ಲೆಯ ಜನರನ್ನು ಕಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಬಗ್ಗೆ ಪೋಷಕರಲ್ಲಿ ಆತಂಕ ಹೆಚ್ಚುತ್ತಿದ್ದು, ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆ ಎಂದು ಡಾ. ಸುಧಾ ಹಾಲಕಾಯಿ ತಿಳಿಸಿದ್ದಾರೆ.