×
Ad

Kamalapura | ಬೆಳೆ ವಿಮೆ 2ನೇ ಕಂತು ಬಿಡುಗಡೆಗೆ ರೈತರ ಆಗ್ರಹ

ಓಕಳಿ ಗ್ರಾಮ ಪಂಚಾಯತ್‌ ರೈತರ ಪ್ರತಿಭಟನೆ; ತಹಶೀಲ್ದಾರರಿಗೆ ಮನವಿ

Update: 2026-07-11 19:53 IST

ಕಮಲಾಪುರ, ಜು.12: 2025–26ನೇ ಸಾಲಿನ ಬೆಳೆ ವಿಮೆಯ ಎರಡನೇ ಕಂತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕಮಲಾಪುರ ತಾಲೂಕಿನ ಓಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತರು, 2025–26ನೇ ಸಾಲಿನ ಬೆಳೆ ವಿಮೆಯ ಮೊದಲ ಕಂತಿನ ಪರಿಹಾರವನ್ನು ಓಕಳಿ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಗ್ರಾಮಗಳ ರೈತರಿಗೆ ಅಲ್ಪ ಪ್ರಮಾಣದಲ್ಲಿ ಜಮಾ ಮಾಡಲಾಗಿದೆ. ಆದರೆ ಎರಡನೇ ಕಂತಿನ ಪರಿಹಾರವನ್ನು ತಾಲೂಕಿನ ಇತರೆ ಗ್ರಾಮಗಳ ರೈತರಿಗೆ ಪಾವತಿಸಲಾಗಿದ್ದರೂ, ಓಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರನ್ನು ಮಾತ್ರ ಹೊರತುಪಡಿಸಲಾಗಿದೆ ಎಂದು ಆರೋಪಿಸಿದರು.

ಬೆಳೆ ಸಮೀಕ್ಷೆ ವೇಳೆ ಓಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗಿರುವ ಸಾಧ್ಯತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಅರ್ಹ ರೈತರಿಗೆ ಎರಡನೇ ಕಂತಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಬಳಿಕ ರೈತರು ತಮ್ಮ ಮನವಿ ಪತ್ರವನ್ನು ಗ್ರೇಡ್–2 ತಹಶೀಲ್ದಾರ್‌ ಶಿವಕುಮಾರ ಶಾಬಾ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜಕುಮಾರ ಜಾಧವ್, ಅಂಬರಾಯ ಪಾಟೀಲ, ದಯಾನಂದ ಹನುಮಂತರಾವ್, ಬಾಬು ಪಟೇಲ್, ಶರಣಗೌಡ ಚಿಗ್ಗುಣಿ, ಭೀಮಾಶಂಕರ ನರೋಣಾ, ಮಹಾದೇವ ಎಕಲೂರ, ಮಂಜುನಾಥ ಜೀಲಿ, ಅನೀಲ ನರೋಣಾ, ಮಹಾದೇವ ಮುಗಳಿ, ರೇವಣಸಿದ್ದಪ್ಪ ಪಾಟೀಲ ಸೇರಿದಂತೆ ಓಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News