ಕಾಳಗಿ | ಜು.19ರಂದು ಎಂಎಲ್‌ಸಿ ತಿಪ್ಪಣಪ್ಪ ಕಮಕನೂರಗೆ ಅಭಿನಂದನಾ ಸಮಾರಂಭ
ಕಾಳಗಿ : ಪೂರ್ಣಾವಧಿಗೆ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣಪ್ಪ ಕಮಕನೂರ ಅವರಿಗೆ ಜುಲೈ 19ರಂದು ಕಾಳಗಿಯಲ್ಲಿ ಅದ್ದೂರಿ ಸಾರ್ವಜನಿಕ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಜಗನ್ನಾಥ ತೇಲಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳಗಿ ತಾಲೂಕಿನವರೇ ಆದ ತಿಪ್ಪಣಪ್ಪ ಕಮಕನೂರ ಅವರಿಗೆ ತವರೂರಿನ ಕೋಲಿ ಸಮಾಜದ ವತಿಯಿಂದ ಪಟ್ಟಣದ ನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಡೊಳ್ಳು–ಹಲಗೆ ವಾದ್ಯಗಳೊಂದಿಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ಅಭಿನಂದನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಟಕಲ್ ಗೌರಿಗುಡ್ಡದ ಸಿದ್ಧಶಿವಯೋಗಿ ಶರಣರು, ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ರಟಕಲ್‌ನ ರೇವಣಸಿದ್ಧ ಶಿವಾಚಾರ್ಯರು, ನೀಲಕಂಠ ಮಹಾಸ್ವಾಮಿಗಳು ಹಾಗೂ ಕಾಳಗಿಯ ನೀಲಕಂಠ ಮರಿದೇವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ರವಿರಾಜ ಕೊರವಿ ಸೇರಿದಂತೆ ಹಲವು ಗಣ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ತಾಲೂಕಿನ ಕೋಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಜುಲೈ 16ರೊಳಗೆ ಸಮಾಜದ ಮುಖಂಡರಾದ ಗುಂಡಪ್ಪ ಕರೆಮನೊರ (ಮೊ. 9741681146) ಅಥವಾ ರಾಘವೇಂದ್ರ ಹಲಚೇರಾ (ಮೊ. 9731155080) ಅವರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಯುವ ಘಟಕದ ತಾಲೂಕು ಅಧ್ಯಕ್ಷ ಪ್ರವೀಣ ನಾಮದಾರ, ಮುಖಂಡರಾದ ಭೀಮರಾವ ಮಾಲಿಪಾಟೀಲ, ಮಲ್ಲಪ್ಪ ದಿಗ್ಗಾಂವ, ಸಿದ್ದು ಕೇಶ್ವರ, ಮಾರುತಿ ನೈಕೋಡಿ, ಜಯರಾಜ ಮುದಿರಾಜ, ಶಿವಕುಮಾರ ಕಮಕನೂರ, ಮಲ್ಲಿಕಾರ್ಜುನ ಮರಗುತ್ತಿ, ಪ್ರಸಾದ ರಟಕಲ್, ರಾಹುಲ್ ಚಿತ್ತಾಪೂರ, ನೀಲಕಂಠಪ್ಪ ಮಾಸ್ತಾರ, ಮಹೇಶ ಗೋಟೂರ, ಶರಣು ಬಂಕಲಗಿ, ರಾಘವೇಂದ್ರ ಬೆಳಗುಂಪಿ, ಪವಾನ ನಾಮದಾರ, ದತ್ತು ಸಾವಳಗಿ, ಭಾಗೇಶ ಕೋಡ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.